ಚಿಕ್ಕಮಗಳೂರು ಜಿಲ್ಲೆಯ ಬಯಲು ಭಾಗದ ತರೀಕೆರೆ, ಅಜ್ಜಂಪುರ, ಮಲೆನಾಡು ಭಾಗದ ಕೊಪ್ಪ, ಎನ್.ಆರ್.ಪುರ ನಾಲ್ಕು ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಿ, ಕಡೂರು ಮತ್ತು ಚಿಕ್ಕಮಗಳೂರಿನ ಸೇರಿದಂತೆ ಐದು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಸರ್ಕಾರದ ತಾರತಮ್ಯ ನೀತಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಮುಖಂಡ ಗುರುಶಾಂತಪ್ಪ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾದಗಿನಿಂದ ಇಲ್ಲಿಯವರೆಗೆ ಚಿಕ್ಕಮಗಳೂರು ಬಯಲುಸೀಮೆ ಭಾಗದ ಕಡೂರು, ತರೀಕೆರೆ, ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಲಕ್ಯಾ ಮತ್ತು ಕಸಬಾ ಹೋಬಳಿಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆ ಬಿದ್ದಿದೆ ಎಂದು ಹೇಳಿದರು.
ಕಡೂರು ಭಾಗದ ರೈತರು ಬೆಳೆ ಮಾಡಲು ಭೂಮಿಯನ್ನು ಹಸನು ಮಾಡಿ ಇಲ್ಲಿಯವರೆಗೆ ಮಳೆ ಬೀಳದ ಕಾರಣ ಜಮೀನನ್ನು ಖಾಲಿ ಬಿಡಲಾಗಿದೆ. ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ಕೆರೆ ಕಟ್ಟೆಗಳೆಲ್ಲಾ ನೀರಿಲ್ಲದೆ ಒಣಗಿ ನಿಂತಿವೆ. ದನ, ಕರುಗಳಿಗೆ ಮೇವು ಬೆಳೆಯಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನೀರಾವರಿ ಇಲ್ಲದ ಕಾರಣ ಮಳೆ ಆಶ್ರಯದಲ್ಲಿ ಕೃಷಿ ಮಾಡಬೇಕಾಗಿದೆ. ಈ ವರ್ಷ ಇದುವರೆಗೂ ರಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಹಳಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ಬರಗಾಲ ಘೋಷಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಲಾಗುವುದು ಎಂದರು.
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಲಕ್ಯಾ ಮತ್ತು ಕಸಬಾ ಹೋಬಳಿಗಳು ಸಹ ಬರಗಾಲದಿಂದ ತತ್ತರಿಸಿವೆ. ಅಲ್ಲಲ್ಲಿ ಕೊಳವೆ ಬಾವಿ ಆಶ್ರಿತರು ಅಲ್ಪಸ್ವಲ್ಪ ಬೆಳೆ ಬೆಳೆದಿದ್ದರೂ ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿದಿರುವುದರಿಂದ ಬೆಳೆ ರೈತರ ಕೈಗೆ ಬರುವುದು ಮರಿಚಿಕೆಯಾಗಿದೆ. ಈಗಾಗಲೇ ಮುಂಗಾರು ಮುಗಿದು ಹಿಂಗಾರು ಪ್ರಾರಂಭವಾಗಿದ್ದರೂ ಇದುವರೆಗೂ ಮಳೆ ಬಾರದ ಕಾರಣ ಹಿಂಗಾರು ಬೆಳೆ ಬೆಳೆಯುವುದು ಅಸಾಧ್ಯವಾಗಲಿದೆ ಎಂದು ತಿಳಿಸಿದರು.
ರೈತರು ಮುಂಗಾರು ಬೆಳೆ ಮಾಡಲು ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಔಷಧಿಗಳಿಗೆ ಲಕ್ಷಾಂತರ ರೂ. ಬಂಡವಾಳ ಹೂಡಿದ್ದಾರೆ. ಈಗ ಹಿಂಗಾರು ಬೆಳೆ ಮಾಡಲು ರೈತರು ಹಣ ಒದಗಿಸಿಕೊಳ್ಳಬೇಕಾಗಿದೆ. ಎಳ್ಳು, ಸೂರ್ಯಕಾಂತಿ, ರಾಗಿ ಜೋಳದಂತ ಬರ ನಿರೋಧಕ ಶಕ್ತಿ ಇರುವ ಬೆಳೆಗಳನ್ನು ಬಿತ್ತನೆ ಮಾಡದಂತ ಪರಿಸ್ಥಿತಿ ಇದ್ದು, ಇಂತಹ ಸಂದರ್ಭದಲ್ಲಿ ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳನ್ನು ಬರ ಪಟ್ಟಯಿಂದ ಕೈ ಬಿಟ್ಟಿರುವುದು ಸರಿಯಲ್ಲ ಎಂದು ದೂರಿದರು.
ಬರ ಪಟ್ಟಿಯಿಂದ ಕೈಬಿಡಲು ಚಿಕ್ಕಮಗಳೂರು, ಕಡೂರು ಮತ್ತು ಮೂಡಿಗೆರೆ ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ. ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಗಳು ಸಮರ್ಪಕವಾಗಿ ಬರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸದೆ ಇದ್ದರೆ ಹವಾಮಾನ ಆಧಾರಿತ ಬೆಳೆ ವಿಮೆ ರೈತರಿಗೆ ಸಿಗುವುದಿಲ್ಲ. ರೈತರು ಕಟ್ಟಿದ ಲಕ್ಷಾಂತರ ರೂ. ಬೆಳೆ ವಿಮೆ ನಷ್ಟವಾಗಲಿದೆ. ಶಾಸಕರುಗಳು ಸರ್ಕಾರದ ಮೇಲೆ ಒತ್ತಡ ಹೇರಿ ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕನ್ನು ಬರಪಟ್ಟಿಗೆ ಸೇರಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಆಹಾರ ಬೆಳೆಗಳಾದ ಬತ್ತ, ರಾಗಿ, ಜೋಳದಂತ ಬೆಳೆಗಳನ್ನು ಬೆಳೆಯಲು ಆಗುವುದಿಲ್ಲ. ಬಹು ವಾರ್ಷಿಕ ಬೆಳೆಗಳಾದ ಅಡಿಕೆ ತೆಂಗಿನ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿವೆ. ರೈತರು ಇಷ್ಟೆಲ್ಲ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದ್ದರೂ ಸರ್ಕಾರ ತಮ್ಮ ಅಧಿಕಾರಿಗಳ ಮೂಲಕ ಸರ್ವೆ ನಡೆಸಿ ನೈಜ ವರದಿ ತರಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ಕಡೂರು ತಾಲ್ಲೂಕು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಲಕ್ಯಾ ಮತ್ತು ಕಸಬಾ ಹೋಬಳಿಗಳನ್ನು ಬರಗಾಲ ಪಟ್ಟಿಯಲ್ಲಿ ಸೇರಿಸಿ ರೈತರಿಗೆ ಅಗತ್ಯ ನೆರವು ಹಾಗೂ ಪರಿಹಾರ ನೀಡುವ ಮೂಲಕ ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಬೇಕು. ಬರಗಾಲ ಎದುರಿಸುತ್ತಿರುವುದರಿಂದ ರೈತರ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಿ.ಮಹೇಶ್ ಮಾತನಾಡಿ, ಚಿಕ್ಕಮಗಳೂರು, ಕಡೂರು ಮತ್ತು ಮೂಡಿಗೆರೆ ಶಾಸಕರ ಮತ್ತು ಜಿಲ್ಲಾಡಳಿತದ ವಿರುದ್ಧ ಮುಂದಿನ ಒಂದು ವಾರದೊಳಗೆ ನಿರಂತರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಎಂ.ಸಿ.ಬಸವರಾಜ, ಉಪಾಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಮುಖಂಡರಾದ ದೇವರಾಜೇಗೌಡ, ಮಧುಶೇಖರ್, ಶಿವಣ್ಣ, ಭದ್ರೇಗೌಡ, ಕೆ.ಟಿ.ಸುನೀಲ್ ಕುಮಾರ್, ಸಿದ್ದೇಗೌಡ, ಯುವರಾಜ್, ಜಗದೀಶ್, ಟಿ.ಎನ್.ಈಶ್ವರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


