November 7, 2026
;
suddi-2 (1)

 

 

ಚಿಕ್ಕಮಗಳೂರು ಸಕಲೇಶಪುರ ಗಂಜಲಗೋಡು ಗ್ರಾಮದಲ್ಲಿ ರೈಲ್ವೆ ಕಾಮಗಾರಿಗಾಗಿ ಭೂಸ್ವಾಧೀನದ ವೇಳೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಖಲೆ ಇರುವವರು, ದಾಖಲೆ ಇಲ್ಲದವರು, ಮನೆ ಇರುವವರು ಹಾಗೂ ಮನೆ ಕಳೆದುಕೊಳ್ಳುವವರ ಸಂಪೂರ್ಣ ಪಟ್ಟಿ ಎಲ್ಲಿದೆ, ಯಾವ ರೈತನ ಎಷ್ಟು ಭೂಮಿ ಪಡೆಯಲಾಗುತ್ತಿದೆ ಎಂಬ ಅಧಿಕೃತ ಪಟ್ಟಿ ಎಲ್ಲಿದೆ, ಬೆಳೆ ಹಾಗೂ ಕಿತ್ತೆಸೆಯಲಾದ ಮರಗಳ ಸಮೀಕ್ಷೆ, ನಷ್ಟದ ಪಟ್ಟಿ ಮತ್ತು ಪರಿಹಾರದ ದಾಖಲೆ ಎಲ್ಲಿದೆ ಎಂದು ರೈತ ಮುಖಂಡರಾದ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ರೈತರಿಗೆ ನೀಡಿದ ನೋಟಿಸ್‍ಗಳು ಹಾಗೂ ಭೂಸ್ವಾಧೀನ ಪ್ರಕ್ರಿಯೆಯ ಸಂಪೂರ್ಣ ದಾಖಲೆ ಇಲ್ಲ, ಪರಿಹಾರ ಪಡೆದವರು, ಪಡೆಯದವರು ಮತ್ತು ನಿರಾಕರಿಸಿದವರ ಅಧಿಕೃತ ಪಟ್ಟಿ ಎಲ್ಲಿದೆ, 2017ರಲ್ಲಿ ಇಬ್ಬರು ರೈತರಿಗೆ ಭೂಮಿ ಮಂಜೂರು ಮಾಡಿ, ಪಹಣಿ?ಖಾತೆ ನೀಡಿ ಸ್ವಾಧೀನದಲ್ಲಿದ್ದ ಜಮೀನಿಗೆ ರೈಲ್ವೆ ನೋಟಿಸ್ ನೀಡಿ, ಪರಿಹಾರ ನೀಡುವ ಹಂತದಲ್ಲಿ ಮಾತ್ರ ಮಂಜೂರಾತಿ ರದ್ದುಪಡಿಸಿರುವುದಕ್ಕೆ ಕಾರಣವೇನು ಎಂದರು.

ಇದು ನಿಯಮಬದ್ಧವೇ ಅಥವಾ ರಾಜಕೀಯ ಪ್ರೇರಿತವೇ ,ಇಂದು ಹಾಜರುಪಡಿಸದ ದಾಖಲೆಗಳನ್ನು ಮುಂದೆ ಸೃಷ್ಟಿಸಿ ಅಥವಾ ಬದಲಾಯಿಸಿ ಪ್ರಕರಣವನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಸರ್ಕಾರ ಯಾವ ಭರವಸೆ ನೀಡುತ್ತದೆ, ಆದ್ದರಿಂದ ಇದುವರೆಗೆ ಹಾಜರುಪಡಿಸದ ಎಲ್ಲಾ ಮೂಲ ದಾಖಲೆಗಳನ್ನು ಸಂರಕ್ಷಿಸಿ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ಪ್ರಶ್ನೆಗಳಿಗೆ ಸ್ಥಳದಲ್ಲೇ ಲಿಖಿತ ಉತ್ತರ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ; ಮೌಖಿಕ ಭರವಸೆ ನಮಗೆ ಒಪ್ಪಿಗೆಯಿಲ್ಲ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಪರಿಶೀಲನಾ ಸಮಿತಿ ರಚಿಸಿ, ಭೂಮಿ, ಮನೆ, ಬೆಳೆ, ಮರ, ದಾಖಲೆ ಮತ್ತು ಪರಿಹಾರ ಸೇರಿದಂತೆ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈಲ್ವೆ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ ಆದರೆ ರೈತರ ಹಕ್ಕುಗಳಿಗೆ ಅನ್ಯಾಯವಾಗಬಾರದು, ದಾಖಲೆ ಸಮೇತ ಲಿಖಿತ ಉತ್ತರ ನೀಡಿ, ಸಂಪೂರ್ಣ ಪಾರದರ್ಶಕತೆಯಿಂದ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ರೈತ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *