August 31, 2026
;
suddi-1 (5)

 

 

ಕ್ರೀಡಾಪಟುಗಳು ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಉನ್ನತವಾದ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ನೇತಾಜಿ ಸುಭಾಷ್‍ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಚಿಕ್ಕಮಗಳೂರು ತಾಲ್ಲೂಕು ದಸರಾ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಅವರ ನೆನಪಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದೇ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಯುತ್ತಿರುವುದು ಅತ್ಯಂತ ಸುದಿನವಾಗಿದೆ. ಮೈಸೂರು ದಸರಾ ಕ್ರೀಡಾಕೂಟದ ಸುದೀರ್ಘ ಪರಂಪರೆ ಹಾಗೂ ನೆನಪನ್ನು ಉಳಿಸಿಕೊಂಡು ಹೋಗಲು ರಾಜ್ಯಾದ್ಯಂತ ಇಂತಹ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜರ ಕಾಲದಿಂದಲೂ ಕ್ರೀಡೆ ಮತ್ತು ಪ್ರತಿಭೆಗಳಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಅಥ್ಲೆಟಿಕ್ಸ್‍ನಿಂದ ಹಿಡಿದು ಕುಸ್ತಿಯವರೆಗೆ ಹಲವು ಸ್ಪರ್ಧೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ದಸರಾ ಕ್ರೀಡಾಕೂಟದಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲದೆ, ಶಾಲಾ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಭಾಗವಹಿಸಲು ಅವಕಾಶವಿದೆ. ಕ್ರೀಡೆಯಲ್ಲಿ ಭಾಗವಹಿಸುವುದೇ ಮುಖ್ಯ. ಸೋತವರು ಕುಗ್ಗದೆ, ಗೆದ್ದವರು ಬೀಗದೆ ನಿರಂತರ ಪರಿಶ್ರಮ ವಹಿಸಬೇಕು. ಕ್ರೀಡಾ ಮನೋಭಾವವೇ ಪ್ರತಿಯೊಬ್ಬ ಕ್ರೀಡಾಪಟುವಿನ ನೈಜ ಶಕ್ತಿಯಾಗಿದೆ ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಪಠ್ಯದ ಜೊತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದರು.

ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಆರೋಗ್ಯ ವೃದ್ಧಿಸುವುದಲ್ಲದೆ ದೈಹಿಕವಾಗಿಯೂ ಗಟ್ಟಿಯಾಗಲು ಸಾಧ್ಯವಾಗುತ್ತದೆ. ಕ್ರೀಡಾಪಟುಗಳು ಉನ್ನತ ಮಟ್ಟದ ಕ್ರೀಡಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಸೋತವರು ಎಂದಿಗೂ ಕುಗ್ಗಬಾರದು, ಗೆದ್ದವರು ಹಿಗ್ಗದೆ ಮುಂದಿನ ಹಂತದ ಸಾಧನೆಗೆ ಶ್ರಮಿಸಬೇಕು ಎಂದರು.

ತೀರ್ಪುಗಾರರು ಯಾವುದೇ ಪಕ್ಷಪಾತವಿಲ್ಲದೆ ಪ್ರಾಮಾಣಿಕವಾಗಿ ತೀರ್ಪು ನೀಡಿ ಕ್ರೀಡೆಯ ಘನತೆಯನ್ನು ಎತ್ತಿಹಿಡಿಯಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಸದಾ ಕಾಯ್ದುಕೊಳ್ಳಲು ಕ್ರೀಡೆಗಳು ಅತ್ಯಂತ ಅವಶ್ಯಕವಾಗಿದ್ದು, ಸಮಾಜದಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಮಾತ್ರವೇ ಸ್ವಾಸ್ಥ್ಯ ಹಾಗೂ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.

ಮನುಷ್ಯನ ಶಾರೀರಿಕ ದೃಢತೆ ಹಾಗೂ ಮಾನಸಿಕ ನೆಮ್ಮದಿಗೆ ಕ್ರೀಡಾ ಚಟುವಟಿಕೆಗಳು ಪ್ರಮುಖ ಚಾಲಕ ಶಕ್ತಿಯಾಗಿವೆ. ಮನಸ್ಸಿನ ಪ್ರತಿಯೊಂದು ಚಟುವಟಿಕೆಯೂ ಸಕಾರಾತ್ಮಕವಾಗಿ ಹಾಗೂ ಆರೋಗ್ಯಕರವಾಗಿ ಇರಬೇಕಾದರೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆರೋಗ್ಯವಂತ ನಾಗರಿಕರಿಂದಷ್ಟೇ ಸಶಕ್ತ ಸಮಾಜದ ನಿರ್ಮಾಣ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಕ್ರೀಡೆಯು ಒಂದು ಮಹತ್ತರ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.

ಕ್ರೀಡಾಕೂಟದ ಆರಂಭದಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುತ್ತಾನೆ. ಬರೀ ಪ್ರತಿಜ್ಞೆ ಸ್ವೀಕರಿಸುವುದಷ್ಟೇ ಅಲ್ಲದೆ, ಆ ವಿಧಿಯ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳುವುದೇ ನಿಜವಾದ ‘ಸ್ಪೋರ್ಟ್ಸ್‍ಮ್ಯಾನ್ ಸ್ಪಿರಿಟ್’. ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಸದ್ಭಾವನೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಶಿಸ್ತು ಹಾಗೂ ಕ್ರೀಡಾ ಧರ್ಮವನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಬಾಲ್ ಬ್ಯಾಡ್ಮಿಂಟನ್ ಸಂಘದ ಅಧ್ಯಕ್ಷ ಸುಂದರೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಡಾ.ಸಿ.ರಮೇಶ್, ಪುನೀತ್, ಸಂತೋಷ್ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಇದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;