November 7, 2026
;
Screenshot_20260829-092449~2

 

 

ವ್ಯಾಯಾಮ, ಧ್ಯಾನ, ಮಿತಾಹಾರ ಜೀವನಶೈಲಿ ರೂಢಿಸಿಕೊಂಡರೆ ಮಹಿಳೆಯರ ಆರೋಗ್ಯಪಾಲನೆ ಸಾಧ್ಯ ಎಂದು ಸ್ತ್ರೀರೋಗತಜ್ಞೆ ಡಾ||ವೀಣಾಸ್ವಾಮಿ ಅಭಿಪ್ರಾಯಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ಆಲ್ದೂರುವಲಯ ಶರಣೆ ನೀಲಾಂಬಿಕೆ ತಂಡ ಚಿಕ್ಕಮಗಳೂರು  ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ನೂಲು ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಒತ್ತಡದ ಬದುಕಿನಲ್ಲಿ ಇರುತ್ತಾರೆ. ಕುಟುಂಬ, ವೃತ್ತಿ, ಸಮಾಜದ ಕಾರ್ಯಗಳಲ್ಲೆಲ್ಲ ತೊಡಗಿಸಿಕೊಂಡಿರುವುದರಿಂದ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕಷ್ಟಸಾಧ್ಯ.  ತಾವು ಮಾನಸಿಕ ಮತ್ತು ದೈಹಿಕ ಆರೋಗ್ಯ ಪಾಲನೆಗೆ ಗಮನಕೊಡಬೇಕು.  ಪ್ರತಿನಿತ್ಯ ವ್ಯಾಯಾಮ, ಧ್ಯಾನ ಹಾಗೂ ಪೌಷ್ಠಿಕ-ಹಿತಮಿತ ಆಹಾರ ಸೇವನೆಯಂತಹ ಅಭ್ಯಾಸವನ್ನು ರೂಢಿಸಕೊಳ್ಳುವುದರಿಂದ ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಡಾ||ವೀಣಾ ಸಲಹೆ ಮಾಡಿದರು.

ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ 40ರ ನಂತರ ವಿವಿಧ ಆರೋಗ್ಯ ಸಮಸ್ಯೆಗಳು ಸಹಜ.  ನಮ್ಮ ಆಹಾರಸೇವನೆ, ಜೀವನಶೈಲಿ, ಒತ್ತಡದ ಕಾರ್ಯಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಸಿಟ್ಟು-ಸೆಡವು, ಬೆವರುವಿಕೆ, ತಾಳ್ಮೆಯ ಕೊರತೆಯಂತಹ ಲಕ್ಷಣಗಳಿರುವ ಮನೋಪಾಸ್ ಅರ್ಥಮಾಡಿಕೊಳ್ಳಬೇಕು.  ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೊಳಗಾಗುವುದು ಒಳಿತು ಎಂದು.

ಸರ್ಕಾರ ಆರೋಗ್ಯಪಾಲನೆ ಹಿನ್ನಲೆಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ.  ವಿವಿಧ ಕಾಯಿಲೆ ನಿಯಂತ್ರಿಸಲು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು.  ಆರೋಗ್ಯ ವಿಮೆಗೆ ಎಲ್ಲರೂ ಒಳಪಡುವುದು ದೀರ್ಘಕಾಲಿಕ ಅನುಕೂಲಕರ.  ಸಾಮಾನ್ಯವಾಗಿ ಮಹಿಳೆಯರಿಗೆ ಗರ್ಭಕಂಠ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚಾಗಿ ಕಾಡುತ್ತದೆ.  ಇದರ ನಿಯಂತ್ರಣಕ್ಕೆ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಆರಂಭಿಕ ತಪಾಸಣೆ ಉತ್ತಮ ಎಂದರು.

ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಮನೆಯಲ್ಲಿ ಪೋಷಕರು ಮುತುವರ್ಜಿ ವಹಿಸಬೇಕು.  ಓದು, ವೃತ್ತಿ ಮತ್ತಿತರ ಕಾರಣಗಳಿಗಾಗಿ 30ವರ್ಷ ದಾಟಿದ ನಂತರ ಮದುವೆ ಮಾಡುಕೊಳ್ಳುವ ಸಂದರ್ಭಗಳು ಹೆಚ್ಚಾಗುತ್ತಿದೆ.  ಇದರಿಂದ ಆರೋಗ್ಯವಂತ ಮಕ್ಕಳನ್ನು ಪಡೆಯುವುದು ಸೇರಿದಂತೆ ವಿವಿಧ ತೊಂದರೆಗಳಿಗೆ ಕಾರಣವಾಗುತ್ತಿದೆ.  ಹದಿವಯಸ್ಸಿನಲ್ಲೆ ಮದುವೆ ಮಾಡಿಕೊಳ್ಳುವುದು ಪ್ರಕೃತಿ ಸಹಜ ನಿಯಮ. ಈ ಬಗ್ಗೆ ಅಜ್ಜಿ-ತಾಯಂದಿರು ಸೇರಿದಂತೆ ಹಿರಿಯರು ಹೆಣ್ಣುಮಕ್ಕಳಿಗೆ ತಿಳುವಳಿಕೆ ನೀಡಬೇಕೆಂದರು.

ಮಹಿಳೆಯರ ಸರ್ವತ್ತೋಮುಖ ಅಭಿವೃದ್ಧಿಗೆ ಪೂರಕವಾಗಿ ಅಕ್ಕಮಹಾದೇವಿ ಮಹಿಳಾ ಸಂಘ ಕಾರ್ಯನಿರ್ವಹಿತ್ತಿರುವುದು ಸಂತೋಷದ ಸಂಗತಿ. ಆರೋಗ್ಯ ಶಿಬಿರ-ಲಸಿಕೆ-ಜಾಗೃತಿ ಕಾರ್ಯಕ್ರಮಗಳಲ್ಲಿ ತಾವೂ ಪಾಲ್ಗೊಂಡು ಸಹಕರಿಸುವುದಾಗಿ ಡಾ|| ವೀಣಾಸ್ವಾಮಿ ನುಡಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ನೂಲುಹುಣ್ಣಿಮೆಯಂದು ದೇಶಾದ್ಯಂತ ‘ರಕ್ಷಾ ಬಂಧನ’ ಕಾರ್ಯಕ್ರಮ ನಡೆಸಲಾಗುತ್ತಿದೆ.  ಅಣ್ಣ ತಂಗಿಯರು ಬಾಂಧವ್ಯ ಬೆಸುಗೆಯ ಪ್ರತೀಕವಿದು.  ಉತ್ತರಕರ್ನಾಟಕದಲ್ಲಿ ವ್ಯಾಪಕವಾದ ಆಚರಣೆ ಇದೆ.  ಮಹಿಳೆಯರಿಗೆ ರಕ್ಷಣೆ-ಭದ್ರತೆಯನ್ನು ಸಹೋದರ ಸಮೂಹ ಒದಗಿಸುವ ಅಭಯ ನೀಡುವ ಮಹತ್ವದ ಹಬ್ಬವಿದು ಎಂದರು.

ಸಂಘದ ನಿರ್ದೇಶಕಿ ವೀಣಾಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ  ಪ್ರತಿತಿಂಗಳೂ ಹುಣ್ಣಿಮೆ ದಿನದಂದು ಒಂದೊಂದು ತಂಡದ ಮೂಲಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.  ಈ ಬಾರಿ ಆಲ್ದೂರುವಲಯದ ಎಲ್ಲ ಸದಸ್ಯರು ಉತ್ಸಾಹದಿಂದ ಕಾರ್ಯಕ್ರಮ ಆಯೋಜಿಸಿದ್ದಾರೆ. ನೂಲುಹುಣ್ಣಿಮೆ ಮತ್ತು ರಕ್ಷಾಬಂಧನದ ಸುಸಂದರ್ಭಕ್ಕೆ ಅನುಗುಣವಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ.  ಎಲ್ಲ ಸದಸ್ಯರು ಕೈಜೋಡಿಸಿದಾಗ ಉತ್ತಮಕಾರ್ಯ ಮಾಡಬಹುದೆಂದರು.

ಉಪಾಧ್ಯಕ್ಷೆ ಕುಸುಮಾರಾಜಶೇಖರ್, ಕಾರ್ಯದರ್ಶಿ ಆಶಾಹೇಮಂತ್, ಖಜಾಂಚಿ ಪಾರ್ವತಿಬಸವರಾಜು, ಸಹಕಾರ್ಯದರ್ಶಿ ಮಧುಮತಿ,  ಸಂಘಟನಾಕಾರ್ಯದರ್ಶಿ ಮಂಜುಳಮ್ಮ ವೇದಿಕೆಯಲ್ಲಿದ್ದರು.

ಆಲ್ದೂರು ವಲಯದ ಸದಸ್ಯರುಗಳಾದ ಮಾನಸಹರೀಶ್ ಸ್ವಾಗತಿಸಿ, ಸುನೀತಾಮಂಜುನಾಥ ನಿರೂಪಿಸಿ, ದಾಕ್ಷಾಯಣಿಬಸವರಾಜು ವಂದಿಸಿದರು.  ಪೂರ್ಣಿಮಾ ಅತಿಥಿಪರಿಚಯಿಸಿದ್ದು, ಸ್ಮಿತಾ ಪ್ರಾರ್ಥಿಸಿ, ಕಲಾ, ಸಹನಾ, ಅನಿತಾ ವೇದಘೋಷ ಮಾಡಿದ್ದು.  ತನೂಜಾರಾಜೇಶ್, ಸಿಂಧೂ, ಕಲ್ಪನಾ ತಂಡ ನಾಡಗೀತೆ ಹಾಡಿದರು.

ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ವೀಣಾಮಲ್ಲಿಕಾರ್ಜುನ್ ಬಹುಮಾನ ವಿತರಿಸಿದರು. ಜಾನಪದನೃತ್ಯ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.

 

 

Leave a Reply

Your email address will not be published. Required fields are marked *