ಜನಗಣತಿಯ ಮಾಹಿತಿ ನಿಖರ ಮತ್ತು ಸಮಗ್ರವಾಗಿ ದಾಖಲಿಸುವುದು ಅತ್ಯಂತ ಪ್ರಾಮುಖ್ಯತೆ ಹೊಂದಿರುವುದರಿಂದ ಗಣತಿ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಲೋಪ ದೋಷಗಳಿಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಭಾರತ ಜನಗಣತಿ 2027 ರ ಅಂಗವಾಗಿ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಮೊದಲ ಹಂತದಲ್ಲಿ ಇಗಾಗಲೇ ಮನೆಗಳ ಪಟ್ಟಿ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 2ನೇ ಹಂತದಲ್ಲಿ ಜನಸಂಖ್ಯೆ ಗಣತಿ ಆರಂಭಗೊಳ್ಳುತ್ತಿದ್ದು ಮನೆಮನೆ ಗಣತಿ ಕಾರ್ಯವು ಮುಂಬರುವ ಜನವರಿ 25 ರಿಂದ ಪ್ರಾರಂಭವಾಗಲಿದೆ. ಇದಕ್ಕು ಮುನ್ನ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಿದ್ದು ಜನವರಿ 10 ರಿಂದ 24 ರವರೆಗೆ 15 ದಿನಗಳ ಕಾಲಾವಕಾಶವನ್ನು ಸ್ವಯಂ ಗಣತಿಗೆ ನೀಡಲಾಗಿದೆ ಎಂದರು.
ಸ್ವಯಂ ಗಣತಿ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಕುಟುಂಬ ಹಾಗೂ ಮನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವತಹಃ ದಾಖಲಿಸಿಕೊಳ್ಳಬಹುದು. ಸ್ವಯಂ ಗಣತಿ ನಂತರ ಗಣತಿದಾರರು ಮನೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದ ಅವರು ಜನಗಣತಿ 2ನೇ ಹಂತದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಗಾರ ಆಯೋಜಿಸಲಾಗಿದ್ದು, ತರಬೇತಿಯ ಸಂಪೂರ್ಣ ಮಾಹಿತಿ ಪಡೆದು ಕೊಳ್ಳಬೇಕು. ಜನಗಣತಿಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಯಾವುದೇ ಸಂದೇಹಗಳಿದಲ್ಲಿ ಜನಗಣತಿ ಕಾರ್ಯಾಚರಣೆ ಜಿಲ್ಲಾ ನೋಡಲ್ ಅಧಿಕಾರಿಗಳಿಂದ ಸಂದೇಹ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು
ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮಾತನಾಡಿ ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮಾಡುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಪ್ರಸ್ತುತ 2ನೇ ಹಂತದ ಜನಸಂಖ್ಯೆ ಗಣತಿ ಪ್ರಾರಂಭಗೊಳ್ಳುತ್ತಿದ್ದು ಅದಕ್ಕಾಗಿ ಕಾರ್ಯಗಾರ ಆಯೋಜಿಸಲಾಗಿದೆ. ಈ ಸಂಬಂಧ ಈಗಾಗಲೇ ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು ಇದೀಗ ಚಾರ್ಜ್ ಅಧಿಕಾರಿಗಳು, ಸಹಾಯಕ ಚಾರ್ಜ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಹಂತದಲ್ಲಿ ಜನಸಂಖ್ಯೆ ಗಣತಿಗಾಗಿ ಪಾಪುಲೇಷನ್ ಬ್ಲಾಕ್ಗಳನ್ನು ಯಾವ ರೀತಿ ರಚನೆ ಮಾಡಬೇಕು, ಒಂದು ವೇಳೆ ಹೆಚ್ಚುವರಿ ಬ್ಲಾಕ್ಗಳ ಅಗತ್ಯವಿದ್ದಲ್ಲಿ ಯಾವ ಮಾನದಂಡ ಹಾಗೂ ವಿಧಾನಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ರೂಪದಲಿದ್ದು ಗಣತಿದಾರರು ಆ್ಯಪ್ ಮೂಲಕ ಮಾಹಿತಿ ಸÀಂಗ್ರಹಿಸಿದರೆ, ಸಾರ್ವಜನಿಕರು ವೆಬ್ಪೋರ್ಟಲ್ ಮೂಲಕ ಸ್ವಯಂ ಜನಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಸ್ವಯಂ ಜನಗಣತಿಯಿಂದ ಸಮಯ ಉಳಿತಾಯವಗುವುದಲ್ಲದೇ ದತ್ತಾಂಶದ ನಿಖರತೆ ಹೆಚ್ಚುತ್ತದೆ. ಗಣತಿದಾರರು ಸ್ಥಳಕ್ಕೆ ಬೇಟಿ ನೀಡಿದಾಗ ಸಾರ್ವಜನಿಕರು ನೀಡುವ ಎಸ್.ಸಿ ಐಡಿ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಬಹುದಾಗಿದೆ. ಮೊಬೈಲ್ ಸಂಖ್ಯೆ ಹಾಗೂ ಬ್ಲಾಕ್ ಲಿಂಕ್ ಮಾಡುವುದರಿಂದ ಲೊಕೇಶನ್ ಹಾಗೂ ಮರು ಪರಿಶೀಲನೆ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ತಿಳಿಸಿದರು ಜನಗಣತಿ ನಮೂನೆಯಲ್ಲಿ ಒಟ್ಟು 40 ಪ್ರಶ್ನೆಗಳಿರಲಿದ್ದು ಹೆಸರು, ಲಿಂಗ, ಮನೆಯ ಮುಖ್ಯಸ್ಥರೊಂದಿಗಿನ ಸಂಬಂಧ, ವಯಸ್ಸು, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ಜಾತಿ , ಪೋಷಕರ ವಿವರ, ವಿಕಲ ಚೇತನರ ವಿವರ, ಸಾಕ್ಷರತೆ, ಮಾತೃಭಾಷೆ, ಗರಿಷ್ಠ ಶಿಕ್ಷಣ, ಉದ್ಯೋಗದ ಸ್ವರೂಪ, ವಲಸೆಗೆ ಕಾರಣ, ಮೂಲ ಸ್ಥಳ, ಹಾಗೂ ಆಧಾರ್, ಪ್ಯಾನ್, ಚಾಲನ ಪರವಾನಗಿ ಮತ್ತು ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ವಿಜಯ ಆತ್ಮಾರಾಮ್ ಅಹಿರೆ ಅವರು ಕಾರ್ಯಗಾರದಲ್ಲಿ ತರಬೇತಿ ನೀಡಿದರು. ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀನಾಕ್ಷಿ ಆರ್ಯ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.


