November 7, 2026
;
IMG-20261106-WA0068

 

 

ಚಿಕ್ಕಮಗಳೂರು ರೋಟರಿ ಕ್ಲಬ್‍ನಿಂದ ನಗರದ ಸಂಚಾರಿ ಪೊಲೀಸರಿಗೆ ಸುಮಾರು 40,000ರೂ. ವೆಚ್ಚದ ಸುರಕ್ಷಿತಾ ಜಾಕೆಟ್‍ಗಳನ್ನು ಅಧ್ಯಕ್ಷ ಎನ್.ಚಿದಾನಂದ್ ನೇತೃತ್ವದಲ್ಲಿ ವಿತರಿಸಲಾಯಿತು.

ನಗರದ ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ‘ಹೈ ವಿಜಿಬಲ್ ವೇರ್’ಗಳನ್ನು ಸ್ವೀಕರಿಸಿ ಮಾತನಾಡಿದ ಸಂಚಾರಿ ಪೊಲೀಸ್ ಠಾಣಾಧಿಕಾರಿ ಆದರ್ಶಕುಮಾರ್, ರೋಟರಿಯ ಸಮಾಜಮುಖಿ ಕಾರ್ಯವನ್ನು ಪ್ರಶಂಸಿಸಿದರು.

ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷಾ ಸಂಚಾರದ ಶಿಕ್ಷಣ ಅಗತ್ಯ. ಎಲ್ಲರೂ ರಸ್ತೆ ಸುರಕ್ಷತಾ ಸಂದರ್ಭದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ಆದರೆ ಬಹಳಷ್ಟು ಜನರು ನಿಯಮಗಳ ಅರಿವಿರದಂತೆ ವರ್ತಿಸುವುದು ವಿಷಾದನೀಯ ಎಂದ ಆದರ್ಶಕುಮಾರ್, ಸಂಚಾರಿ ನಿಯಮಗಳ ಬಗ್ಗೆ ಪೊಲೀಸ್ ಇಲಾಖೆ ನಿರಂತರವಾಗಿ ಜನಜಾಗೃತಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ರಸ್ತೆಗಳಲ್ಲಿ ಧೂಳು, ಮಳೆ ನಡುವೆ ಕಾರ್ಯನಿರ್ವಹಿಸುವ ಪೊಲೀಸರ ಬಗ್ಗೆ ಸಹನುಭೂತಿ ಅಪೇಕ್ಷಣೀಯ. ಹೆಂಡತಿ ಮಕ್ಕಳನ್ನು ಮರೆತು ಹಗಲು-ರಾತ್ರಿ ಎನ್ನದೆ ಬಿಸಿಲು-ಮಳೆ ಎನ್ನದೆ ಬೀದಿಯಲ್ಲಿ ನಿಂತು ಕಾರ್ಯನಿರ್ವಹಿಸುವವರ ಬಗ್ಗೆ ಕೆಲವರಿಂದ ಕುಹಕದ ಮಾತುಗಳನ್ನು ಕೇಳುತ್ತೇವೆ. ಶೇ.30ಕ್ಕಿಂತ ಹೆಚ್ಚು ಜನರು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುವುದನ್ನು ಕಂಡು ಸಂಚಾರಿ ಪೊಲೀಸರ ಬಗ್ಗೆ ಹಗುರವಾಗಿ ಬೈಯುವುದು ಸಾಮಾನ್ಯ. ಆದರೆ ಅವರಿಗೂ ಒತ್ತಡ, ನೀರಡೆಕೆ, ಸೋಲು-ಸುಸ್ತು ಸಹಜ ಎಂಬುದನ್ನು ಅರಿಯಬೇಕು. ಎಲ್ಲರೂ ನಿಯಮಗಳನ್ನು ಪಾಲಿಸಿದರೆ ಒಳಿತ್ತೆಂದರು.
ಕರ್ತವ್ಯ ನಿರ್ವಹಿಸುವವರನ್ನು ಹುರಿದುಂಬಿಸುವ-ಪ್ರೋತ್ಸಾಹಿಸುವ ಕೆಲಸವನ್ನು ರೋಟರಿಯಂತಹ ಸೇವಾ ಸಂಸ್ಥೆಗಳು ಮಾಡಿಕೊಂಡೆ ಬಂದಿವೆ. ಇಂದು ತಲಾ 800ರೂ. ಗೂ ಹೆಚ್ಚು ವೆಚ್ಚದ ಜಾಕೆಟ್ ನೀಡಿದೆ. ನಗರದ ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಐ.ಜಿ.ರಸ್ತೆಯಲ್ಲಿ ಈಗಾಗಲೇ ದ್ವಿಚಕ್ರ ಮತ್ತು ಚತುಷ್ಚÀಕ್ರ ವಾಹನಗಳ ನಿಲುಗಡೆಗೆ ಬಿಳಿಬಣ್ಣದ ಮೂಲಕ ಸ್ಥಳ ಗುರುತಿಸಲಾಗಿದೆ. ಮುಂದೆ ಎಂ.ಜಿ.ರಸ್ತೆ, ಮಲ್ಲಂದೂರುರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲೂ ವಾಹನ ನಿಲುಗಡೆಗೆ ಸ್ಥಳ ನಿಗದಿಸಲಾಗುವುದೆಂದರು.

ಎ.ಐ.ಟಿ.ವೃತ್ತ ಮತ್ತು ಸಿಂಡಿಕೇಟ್ ಬ್ಯಾಂಕ್ ವೃತ್ತಗಳಲ್ಲಿ ಪೊಲೀಸ್ ಚೌಕಿ ನಿರ್ಮಿಸುವ ಮೂಲಕ ಅಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ಪೊಲೀಸರಿಗೆ ತಾತ್ಕಾಲಿಕ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನಗರದ ಮುಖ್ಯರಸ್ತೆಗಳಲ್ಲಿ ಅಂಗಡಿ-ಮಳಿಗೆ ಜೊತೆಗೆ ಮನೆಗಳನ್ನೂ ಹೊಂದಿರುವವರು ವಾಹನಗಳನ್ನು ಸದಾ ರಸ್ತೆಗಳಲ್ಲೆ ನಿಲ್ಲಿಸುತ್ತಾರೆ. ಜೊತೆಗೆ ಲಾಡ್ಜ್‍ಗಳು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ ಎಂದು ಉತ್ತರಿಸಿದ ಆದರ್ಶಕುಮಾರ, ನಗರಸಭೆ ಈ ನಿಟ್ಟಿನಲ್ಲಿ ಅಗತ್ಯಕ್ರಮ ಜರುಗಿಸಬೇಕೆಂದರು.

ರಸ್ತೆಬದಿಯ ಫುಟ್‍ಬಾತ್‍ನಲ್ಲೆ ಸಂಚಾರಿಗಳು ನಡೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಚಾಲನಾ ಪರವಾನಿಗಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಚಾಲಕರು ತಮ್ಮ ಜೊತೆಗಿಟ್ಟುಕೊಂಡಿರಬೇಕೆಂದ ಸಂಚಾರಿ ಪೊಲೀಸ್ ಎಸ್‍ಐ ಆದರ್ಶಕುಮಾರ್, ಮಲ್ಲಂದೂರು ರಸ್ತೆಯ ಸೇತುವೆ ಸುತ್ತಮುತ್ತ ಭಾರೀ ವಾಹನ ನಿಲುಗಡೆಯನ್ನು ತಪ್ಪಿಸಲಾಗಿದೆ ಎಂದರು.

ರೋಟರಿ ವಲಯನಾಯಕ ಎನ್.ಶ್ರೀವಾತ್ಸವ ಮಾತನಾಡಿ ಚಳಿ, ಗಾಳಿ, ಬಿಸಿಲು, ಮಳೆ ಎನ್ನದೆ ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯದ ದುಷ್ಪರಿಣಾಮಗಳನ್ನು ಅನುಭವಿಸುತ್ತಲೇ ಕರ್ತವ್ಯನಿರ್ವಹಿಸುವ ಸಂಚಾರಿ ಪೊಲೀಸರ ಕಾರ್ಯ ಸಮಾಜಕ್ಕೆ ಉಪಯುಕ್ತ. ಅವರು ಕರ್ತವ್ಯ ನಿರ್ವಹಿಸುವುದು ನಾಗರಿಕರಿಗಾಗಿ ಎಂಬ ಪ್ರಜ್ಞೆ ನಮ್ಮಲ್ಲಿರಬೇಕು. ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ಅದರಿಂದ ತೊಂದರೆ ನಮಗೇ ಎಂಬುದನ್ನು ಅರಿಯಬೇಕೆಂದರು.

ಚಿಕ್ಕಮಗಳೂರು ರೋಟರಿ ವತಿಯಿಂದ ಈ ಹಿಂದೆ ಸಂಚಾರಿ ಪೊಲೀಸ್ ಠಾಣೆಗೆ 10 ಸಂಚಾರಿ ಬ್ಯಾರಿಕೇಟ್‍ಗಳನ್ನು ನೀಡಲಾಗಿತ್ತು. ಮುಂದೆ ಎರಡು ಪೊಲೀಸ್‍ಚೌಕಿಗಳನ್ನು ನಿರ್ಮಾಣ ಮಾಡಲು ನೆರವು ನೀಡಲಾಗುವುದೆಂದ ಶ್ರೀವಾತ್ಸವ, ದೇಶದಲ್ಲಿ ಕ್ಯಾನ್ಸರ್‍ಗಿಂತ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅರಿಯಬೇಕೆಂದರು.

ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಶಿವಕುಮಾರ್ ಕೃತಜ್ಞತೆ ಸಲ್ಲಿಸಿ ಮಾತನಾಡಿ ರಸ್ತೆಗಳಲ್ಲಿ ಕೆಲಸ ಮಾಡುವಾಗ ನಮ್ಮ ಜೀವ ಉಳಿಸಿಕೊಳ್ಳಲು ಈ ಜಾಕೆಟ್‍ಗಳು ಸಹಕಾರಿ. ಚಳಿ, ಮಳೆಗೆ ರಕ್ಷಣೆ ನೀಡುವುದರ ಜೊತೆಗೆ ಮುಂಬರುವ ವಾಹನಗಳ ಬೆಳಕನ್ನು ಪ್ರತಿಫಲಿಸಿ ಕತ್ತಲಿನ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲಕರವಾಗಿದೆ ಎಂದರು.

ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಚಿದಾನಂದ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಅಂತರರಾಷ್ಟ್ರೀಯ ರೋಟರಿಸಂಸ್ಥೆ ಸುಗಮ ರಸ್ತೆಸಂಚಾರ ಜಾಗೃತಿಯ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಎಲ್ಲೆಡೆ ಮಾಡಿಕೊಂಡು ಬಂದಿದೆ. ಸಂಚಾರಿ ಪೊಲೀಸರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಒಂದಷ್ಟು ಸಹಾಯ-ಸಹಕಾರ ನೀಡುವ ಯೋಜನೆಗಳನ್ನು ಕಾರ್ಯನಿರ್ವಹಿಸುತ್ತಿದೆ ಎಂದರು.

ಅಧ್ಯಕ್ಷ ಚಿದಾನಂದ ಸ್ವಾಗತಿಸಿ, ಕ್ಲಬ್ ನಿರ್ದೇಶಕ ಎಂ.ಆರ್.ಕಿರಣ್ ಪ್ರಾಸ್ತಾವಿಸಿ, ಕಾರ್ಯದರ್ಶಿ ಕೆ.ಎಸ್.ಆದರ್ಶ್ ವಂದಿಸಿದರು. ರೋಟರಿ ಜಿಲ್ಲಾ ಮಾಜಿರಾಜ್ಯಪಾಲ ಎಂ.ಸಿ.ಶೇಖರ್ ಸೇರಿದಂತೆ ಹಿರಿಯ ಸದಸ್ಯರು ಜಾಕೆಟ್‍ಗಳನ್ನು ವಿತರಿಸಿದರು.

 

 

Leave a Reply

Your email address will not be published. Required fields are marked *