ಕಾಡಾನೆ ದಾಳಿಯಿಂದ ಇಬ್ಬರು ಅರಣ್ಯ ಸಿಬ್ಬಂದಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ
ಮೂಡಿಗೆರೆ ತಾಲೂಕಿನ ಗೌತಹಳ್ಳಿ ಸಮೀಪದ ಹಾಸ್ಟೆಲ್ ಕಾಡು ಎಂಬ ಪ್ರದೇಶದಲ್ಲಿ ಇಂದು ಗುರುವಾರ ಮುಂಜಾನೆ ಈ ದುರ್ಘಟನೆ ನಡೆದಿದೆ.
ಕಾಡಾನೆ ಅರಣ್ಯ ಸಿಬ್ಬಂದಿಗಳಿಬ್ಬರ ಮೇಲೆ ದಾಳಿ ನಡೆಸಿದೆ. ಇಂದು ಬೆಳಗ್ಗೆ ಎಂದಿನಂತೆ ಆನೆ ಕಾರ್ಯಪಡೆ ಸಿಬ್ಬಂದಿಗಳು ಈ ಭಾಗದಲ್ಲಿರುವ ಕಾಡಾನೆಗಳ ಬಗ್ಗೆ ಚಲನವಲನ ಪರೀಕ್ಷಿಸಿ ಸಾರ್ವಜನಿಕರಿಗೆ ಮಾಹಿತಿ ಕೊಡುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು.
ಈ ಸಂದರ್ಭದಲ್ಲಿ ಒಂಟಿ ಕಾಡಾನೆ ಒಂದು ಏಕಾಏಕಿ ಅರಣ್ಯ ಸಿಬ್ಬಂದಿಗಳ ಮೇಲೆ ಎರಗಿ ಬಂದಿದೆ. ಈ ಸಂದರ್ಭದಲ್ಲಿ ಇಟಿಎಫ್ ಅರಣ್ಯ ಸಿಬ್ಬಂದಿ ರಮೇಶ್ ಅವರನ್ನು ಕಾಡಾನೆ ನೆಲಕ್ಕೆ ಕೆಡವಿ ಅವರ ತೊಡೆ ಮತ್ತು ಹೊಟ್ಟೆ ಭಾಗವನ್ನು ಮೆಟ್ಟಿ ಗಾಯಗೊಳಿಸಿದೆ.

ಅದೇ ರೀತಿ ಮತ್ತೋರ್ವ ಹೊರಗುತ್ತಿಗೆ ನೌಕರ ವಿಶ್ವ ಎನ್ನುವವರ ಮೇಲೆಯೂ ಕಾಡಾನೆ ದಾಳಿ ಮಾಡಿದೆ. ಇವರಲ್ಲಿ ರಮೇಶ್ ಅವರು ತೀವ್ರವಾಗಿ ಗಾಯಗೊಂಡಿದ್ದು ಇಬ್ಬರಿಗೂ ಚಿಕಿತ್ಸೆ ಮುಂದುವರಿಸಲಾಗಿದೆ.

ದಾಳಿ ಮಾಡಿದ ಕಾಡಾನೆ ಅದೇ ಸ್ಥಳದ ಸುತ್ತಮುತ್ತ ಸಂಚರಿಸುತ್ತಿದ್ದು ಕಾಡಾನೆ ವಿಡಿಯೋ ಕ್ಯಾಮೆರದಲ್ಲಿ ಸರಿಯಾಗಿದೆ. ಘಟನೆಯಿಂದ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರು ತೀವ್ರವಾಗಿ ಆತಂಕಗೊಂಡಿದ್ದಾರೆ
ಈ ಭಾಗದಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆಗಳ ಗುಂಪು ಬೀಡು ಬಿಟ್ಟಿದ್ದು ರೈತರ ಬೆಳೆಗಳಿಗೆ ಅಪಾರ ಹಾನಿ ಉಂಟು ಮಾಡುತ್ತವೆ ಹಾಗೆ ಜನರ ಮೇಲೆಯೂ ಎರಗಿ ಬರುತ್ತಿವೆ.



