ನಗರವನ್ನು ದೇವಸ್ಥಾನ ಎಂದ ಭಾವಿಸಿ ಸರ್ವರೂ ಸ್ವಚ್ಚತೆಗೆ ಆದ್ಯತೆ ನೀಡಿ ಸಹಕರಿಸಬೇಕು ಎಂದು ಚಿಕ್ಕಮಗಳೂರು ನಗರಸಭಾಧ್ಯಕ್ಷೆ ಭವ್ಯ ಮಂಜುನಾಥ್ ಕೋರಿದರು.
ನಗರದ ಸಂತೆ ಮೈದಾನದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ನಗರಸಭೆ ಮತ್ತು ಕೈಗಾರಿಕೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಏರ್ಪಡಿಸಲಾಗಿದ್ದ ಸಾರ್ವಜನಿಕರಿಗೆ ಅರಿವು ಮೂಡಿಸುವ ಸ್ವಚ್ಚತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವಸ್ಥಾನವನ್ನು ಸ್ವಚ್ಚತೆಯಾಗಿಡುವಂತೆ ನಾಗರಿಕರು ನಗರದ ಸ್ವಚ್ಚತೆಗೆ ಮುಂದಾಗಬೇಕೆಂದು ಮನವಿ ಮಾಡಿದ ಅವರು, ಸ್ವಚ್ಚತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಸಮಾರೋಪಾದಿಯಲ್ಲಿ ನಡೆದಾಗ ಮಾತ್ರ ಭವಿಷ್ಯದ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಸ್ವಚ್ಚತೆ ಬಗ್ಗೆ ನಗರದ ನಾಗರಿಕರಿಗೆ ಅರಿವು ಮೂಡಿಸಿ ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ನಗರಸಭೆ ವತಿಯಿಂದ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಬೇಕು. ಇದರಿಂದಾಗಿ ಸರಿಯಾದ ಸಮಯಕ್ಕೆ ಮಳೆಯಾಗುವುದರ ಜೊತೆಗೆ ರೈತರು ಕೃಷಿ ಚಟುವಟಿಕೆಯನ್ನು ನಡೆಸಿ ಸಮೃದ್ಧ ಬೆಳೆಯನ್ನು ಬೆಳೆಯಲು ಸಹಕಾರಿಯಾಗುತ್ತದೆ. ಹಲವಾರು ದಶಕಗಳಿಂದ ಪರಿಸರ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕಾದರೆ ಗಿಡ-ಮರಗಳನ್ನು ಬೆಳೆಸುವುದು ಅಗತ್ಯವಾಗಿದೆ. ಜೊತೆಗೆ ನದಿ, ಕೆರೆ-ಕಟ್ಟೆಗಳಂತಹ ನದಿ ಮೂಲಗಳನ್ನು ರಕ್ಷಿಸುವ ಮೂಲಕ ಪರಿಸರ ಉಳಿಸಬೇಕಾಗಿದೆ ಎಂದು ಹೇಳಿದರು.
ಮಾಲಿನ್ಯ ನಿಯಂತ್ರಣವಾದಾಗ ಪ್ರಕೃತಿ ಸಮತೋಲನ ಕಾಪಾಡಲು ಸಹಕಾರಿಯಾಗುತ್ತದೆ, ಗಿಡ-ಮರ ಕಡಿಯುವುದನ್ನು ನಿಲ್ಲಿಸಬೇಕು, ಈ ನಿಟ್ಟಿನಲ್ಲಿ ಪರಿಸರ ಉಳಿಸಲು ನಗರಸಭೆ ನಿರಂತರ ಅರಿವು ಮೂಡಿಸುತ್ತಿದೆ ಎಂದರು.
ಸುಪ್ರೀಂ ಕೋರ್ಟ್ ಆದೇಶದಂತೆ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಸೇರಿದಂತೆ ಸ್ವಚ್ಚತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ, ಪ್ರತಿ ಮನೆಯಲ್ಲಿ 4 ಪ್ರತ್ಯೇಕ ಕಸದ ಬುಟ್ಟಿಗಳನ್ನಿಟ್ಟು, ಕಸ ವಿಂಗಡಣೆ ಮಾಡಿ ಗಂಟೆ ಗಾಡಿಗೆ ನೀಡಬೇಕೆಂದು ಹೇಳಿದರು.
ನಾಲ್ಕು ಹಂತದಲ್ಲಿ ಕಸ ವಿಂಗಡಣೆ ಮಾಡಿ ನೀಡದ ನಾಗರಿಕರ ವಿರುದ್ಧ ನಗರಸಭೆಯಿಂದ ನೀಡಿರುವ ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಕಡಿತ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ನಗರದಲ್ಲಿ ಸ್ವಚ್ಚತೆ ಕಾಪಾಡದ ವಾಣಿಜ್ಯ ಕಟ್ಟಡಗಳು, ಹಾಸ್ಟೆಲ್, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳ ವಿರುದ್ಧ ಕ್ರಮ ಕೈಗೊಂಡು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು, ಸಂಬಂಧಪಟ್ಟ ಮಾಲೀಕರು ಸೂಕ್ತ ಕ್ರಮ ವಹಿಸಬೇಕೆಂದು ವಿನಂತಿಸಿದರು.
ಕಸ ವಿಂಗಡಣೆ ಬಗ್ಗೆ ಬೇಜವಾಬ್ದಾರಿ ತೋರದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಿದ್ದರೂ ನಿಗದಿತ ಸಮಯದಲ್ಲಿ ನಿಯಂತ್ರಣ ಮಾಡಲಾಗಿಲ್ಲ ಎಂದು ವಿಷಾದಿಸಿದ ಅವರು, ಈ ಸಂಬಂಧ ವಾಣಿಜ್ಯೋದಮಿಗಳೂ ಸೇರಿದಂತೆ ಸರ್ವರೂ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪರಿಸರ ನಿಯಂತ್ರಣಾಧಿಕಾರಿ ಡಾ.ಕೆ.ಎಂ.ರಾಜು ಮಾತನಾಡಿ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಮಾಲಿನ್ಯ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ, ಸಂತೆ ಮೈದಾನ ಸ್ವಚ್ಚತೆ, ಮಲ್ಲಂದೂರಿನ ಸರ್ಕಾರಿ ಫೌಡ ಶಾಲೆಯಲ್ಲಿ ಸುಮಾರು 100 ಸಸಿ ನೆಡುವ ಕಾರ್ಯಕ್ರಮ, ನಾಳೆ ಜೂ.3 ರಂದು ಬಿಎಡ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಕ್ವಿಜ್, ಪ್ರಬಂಧ ಸ್ಪರ್ಧೆ ಕಾರ್ಯಕ್ರಮ, ಸಂತ ಜೋಸೆಫರ ಬಾಲಕರ ಪ್ರೌಢಶಾಲೆಯಲ್ಲಿ ಜೂ. 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯಕ್, ಪರಿಸರ ಅಭಿಯಂತರ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ರಂಗಪ್ಪ, ನಾಗಪ್ಪ ಮತ್ತಿತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿದ್ದರು.



