ಹಾಸನ ಜಿಲ್ಲೆ ಗೊರೂರಿನ ಬಳಿ ಹೇಮಾವತಿ ಹಿನ್ನೀರಿಲ್ಲಿ ನದಿಗೆ ಇಳಿದಿದ್ದ ಬೆಂಗಳೂರು ಮೂಲದ ಮೂವರು ಯುವಕರು ನೀರು ಪಾಲಾಗಿದ್ದಾರೆ.
ಚರಣ್ (20), ಮಿಲನ್ (23), ಮಣಿಕಂಠ (20) ಮೃತ ಯುವಕರು. ಆರು ಯುವಕರು ಹಾಗೂ ನಾಲ್ವರು ಯುವತಿಯರು ಒಟ್ಟಾಗಿ ಐದು ಸ್ಕೂಟಿಯಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ವಾಪಾಸ್ ಆಗುತ್ತಿದ್ದರು. ಬರುವಾಗ ಗೂಗಲ್ ಮ್ಯಾಪ್‌ನಲ್ಲಿ ಪ್ರವಾಸಿ ತಾಣ ಹುಡುಕಿ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದರು.
ಚರ್ಚ್ ಬಳಿ ಹೇಮಾವತಿ ನದಿಯ ಹಿನ್ನೀರಿಯಲ್ಲಿ ಈಜಲು ಮೂವರು ಯುವಕರು ಇಳಿದಿದ್ದರು. ಉಳಿದವರು ದಡದಲ್ಲಿ ಕುಳಿತಿದ್ದರು. ಈಜು ಬಾರದ ಕಾರಣ ಮೂವರು ಯುವಕರು ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಉಳಿದ ಸ್ನೇಹಿತರು ನೀರಿನಲ್ಲಿ ಮುಳುಗುವುದನ್ನು ಕಂಡು ಕಿರುಚಾಡಿದ್ದಾರೆ. ಆದರೆ ಇವರನ್ನು ಹೊರತುಪಡಿಸಿ ಬೇರೆ ಯಾರು ಸ್ಥಳದಲ್ಲಿ ಇರಲಿಲ್ಲ. ಯಾರಿಗೂ ಈಜು ಬಾರದೇ ಇದ್ದಿದ್ದರಿಂದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳಿಗಾಗಿ ಶೋಧ ನಡೆಸಿದ್ದಾರೆ. ಸಂಜೆಯೇ ಒಂದು ಮೃತದೇಹ ಸಿಕ್ಕಿದ್ದು, ಇನ್ನಿಬ್ಬರ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ.



