ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ಈ ಪ್ರಕ್ರಿಯೆ ಪಾರದರ್ಶಕವಾಗಿ ಯಶಸ್ವಿ ಕಾಣಲು ಸಾರ್ವಜನಿಕರ ಸಹಕಾರ ಅಗತ್ಯವೆಂದು ಉಪ ವಿಭಾಗಾಧಿಕಾರಿ ನಟೇಶ್ ಹೇಳಿದರು.
ಅವರು ಸೋಮವಾರ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ವಿಧಾನಸಭೆ ಕ್ಷೇತ್ರಕ್ಕೆ ಒಳಪಡುವ ಮೂಡಿಗೆರೆ ತಾಲೂಕಿನಲ್ಲಿ 109, ಚಿಕ್ಕಮಗಳೂರು ತಾಲೂಕಿನಲ್ಲಿ 89. ಕಳಸ ವ್ಯಾಪ್ತಿಯಲ್ಲಿ 33 ಮತಗಟ್ಟೆ ಕೇಂದ್ರವಿದ್ದು, ಮೂಡಿಗೆರೆಯಲ್ಲಿ 77062, ಚಿಕ್ಕಮಗಳೂರಿನಲ್ಲಿ 65510 ಹಾಗೂ ಕಳಸ ತಾಲೂಕಿನಲ್ಲಿ 24727, ಸಂಪರ್ಕಕ್ಕೆ ಸಿಗದ 465 ಮತದಾರರು ಸೇರಿದಂತೆ ಒಟ್ಟು 1.67.299 ಮತದಾರರಿದ್ದಾರೆ. ಈಗಾಗಲೇ 1.63.296 ಮ್ಯಾಪಿಂಗ್ ಅರ್ಜಿ ವಿತರಣೆಯಗಿದ್ದು, ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ವಿವಿಧ ಪಕ್ಷ ಮತಗಟ್ಟೆ ಏಜಂಟರು, ಎಸ್‍ಆರ್‍ಐ ನೋಡಲ್ ಅಧಿಕಾರಿಗಳು ಮನೆ ಮನೆಗೆ ಬೇಟಿ ನೀಡಿ 59,936 ಅರ್ಜಿಗಳು ಗಣಕೀಕರಣಗೊಳಿಸಲಾಗಿದೆ ಎಂದು ಹೇಳಿದರು.
ಬಾಕಿ ಉಳಿಸಿದ್ದ ಪ್ರಕ್ರಿಯೆ ಚುರುಕುಗೊಳಿಸಲು ಕ್ರಮ ವಹಿಸಿದ್ದು, ಪರಿಷ್ಕರಣೆಗಾಗಿ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಭೇಟಿ ಮಾಡಿದ ಸಂದರ್ಭದಲ್ಲಿ ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ಅಗತ್ಯವಾಗಿ ನೀಡುವ ಜತೆಗೆ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಿಕೊಳ್ಳಬೇಕು. ಮತಗಟ್ಟೆ ಅಧಿಕಾರಿಗಳು ಎಲ್ಲೆಂದರಲ್ಲಿ ಕುಳಿತು ಪ್ರಕ್ರಿಯೆ ನಡೆಸದಂತೆ ಮನೆ ಮನೆಗೆ ಭೇಟಿ ನೀಡಲು ಸೂಚಿಸಲಾಗಿದೆ. ಯಾವುದೇ ಆಕ್ಷೇಪಣೆ ಇದ್ದರೆ ಆಗಸ್ಟ್ ತಿಂಗಳಲ್ಲಿ ನಡೆಸುವ ಪರಿಷ್ಕರಣೆ ಸಂದರ್ಭದಲ್ಲಿ ತಿಳಿಸತಕ್ಕದ್ದು. ನಿಖರ ಹಾಗೂ ದೋಷರಹಿತ ನವೀಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶದಿಂದ ಎಲ್ಲಾ ಮತದಾರರು ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಅಶ್ವನಿ ಸೇರಿದಂತೆ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರು ಉಪಸ್ಥಿತರಿದ್ದರು.


