ಚಿಕ್ಕಮಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಲೋಕ ಅದಾಲತ್‌ನಲ್ಲಿ ಕೆನರಾ ಬ್ಯಾಂಕ್‌ನ ಬೃಹತ್ ವಸೂಲಾತಿ ಪ್ರಕರಣವೊಂದು ಅತ್ಯಂತ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ. ತೀವ್ರ ಆರ್ಥಿಕ ಹಾಗೂ ದೈಹಿಕ ಸಂಕಷ್ಟದಲ್ಲಿದ್ದ ವಿಶೇಷಚೇತನ ವ್ಯಕ್ತಿಯೊಬ್ಬರ 8 ಲಕ್ಷಕ್ಕೂ ಅಧಿಕ ಮೊತ್ತದ ಬ್ಯಾಂಕ್ ಸಾಲವನ್ನು ಕೇವಲ 15 ಸಾವಿರಕ್ಕೆ ಇತ್ಯರ್ಥಪಡಿಸಲಾಗಿದೆ.
ವಿಶೇಷಚೇತನ ವ್ಯಕ್ತಿಯ ವಿರುದ್ಧ ಕೆನರಾ ಬ್ಯಾಂಕ್ 8 ಲಕ್ಷಕ್ಕೂ ಅಧಿಕ ಮೊತ್ತದ ಬಾಕಿ ಸಾಲ ವಸೂಲಾತಿಗಾಗಿ ವಿಶೇಷ ಜಾರಿ ಅರ್ಜಿ ಸಲ್ಲಿಸಿತ್ತು. ತೀವ್ರ ದೈಹಿಕ ಅಸಮರ್ಥತೆ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಆ ವ್ಯಕ್ತಿಗೆ ಸಾಮಾನ್ಯ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವುದು ಅತ್ಯಂತ ಕಠಿಣವಾಗಿತ್ತು. ಪ್ರಕರಣದ ಸೂಕ್ಷ್ಮತೆ ಮತ್ತು ವ್ಯಕ್ತಿಯ ಪರಿಸ್ಥಿತಿ ಮನಗಂಡ ಚಿಕ್ಕಮಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯಸ್ಥಿಕೆ ವಹಿಸಿದರು.
ಅರ್ಜಿದಾರರ ದೈಹಿಕ ಸ್ಥಿತಿಯನ್ನು ಪರಿಗಣಿಸಿ, ಸಾಮಾನ್ಯ ನ್ಯಾಯಾಲಯದ ಶಿಷ್ಟಾಚಾರಗಳನ್ನು ಬದಿಗಿಟ್ಟು, ಅಧಿಕಾರಿಗಳೇ ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂಭಾಗದ ಕಚೇರಿಗೆ ನಡೆದುಕೊಂಡು ಬಂದು ಸಂತ್ರಸ್ತರನ್ನು ಭೇಟಿಯಾದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಂಭಾಗದ ಕಚೇರಿಯಲ್ಲಿ ವಿಶೇಷಚೇತನ ವ್ಯಕ್ತಿಯ ಬಳಿಯೇ ನಿಂತು ನ್ಯಾಯಾಧೀಶರು, ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಕಾನೂನು ತಂಡದವರು ಅತ್ಯಂತ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ಆ ವ್ಯಕ್ತಿಯ ತೀವ್ರ ಕಷ್ಟಗಳನ್ನು ಅರ್ಥಮಾಡಿಕೊಂಡ ಬ್ಯಾಂಕ್ ಅಧಿಕಾರಿಗಳು ಬೃಹತ್ ಮೊತ್ತವನ್ನು ಮನ್ನಾ ಮಾಡಲು ಒಪ್ಪಿಗೆ ನೀಡಿದರು. ಅದರಂತೆ, ಬ್ಯಾಂಕ್ ಕೋರಿದ್ದ 8 ಲಕ್ಷಕ್ಕೂ ಅಧಿಕ ಮೊತ್ತದ ಇಡೀ ಪ್ರಕರಣವನ್ನು ಕೇವಲ 15 ಸಾವಿರಕ್ಕೆ ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಈ ಸಂಧಾನ ಪ್ರಕ್ರಿಯೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಚಿಕ್ಕಮಗಳೂರು ಹಿರಿಯ ವಕೀಲ ಬಿ.ಎಂ.ಲಕ್ಷ್ಮಣಗೌಡ, ಪ್ರೀ-ಲಿಟಿಗೇಷನ್ ಕೌನ್ಸಿಲ್ ನ್ಯಾಯಾಂಗ ಸಂಧಾನಕಾರರು ಮತ್ತು ಪ್ಯಾನಲ್ ವಕೀಲರು, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರು ಇದ್ದರು.


