ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರ ವಿರುದ್ಧ ಬೇಜವಬ್ದಾರಿಯುತ ಹಾಗೂ ಅವಮಾನ ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅಲ್ಲದೇ ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಗಾಳಿಗೆ ತೂರುತ್ತಾ ಮನಸೋ ಇಚ್ಛೆ ನಡವಳಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ.ಸುರೇಂದ್ರ ಹೇಳಿದರು.
ಅವರು ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವರ ನಡವಳಿಕೆಯಿಂದಾಗಿ ಪಕ್ಷಕ್ಕೆ ಮುಜುಗರವುಂಟಾಗಿದೆ. ಅವರ ಇಂತಹ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅವರ ವರ್ತನೆಯಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಭಾರಿ ಪೆಟ್ಟು ಬೀಳುತ್ತಿದ್ದು, ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಅವರು ಶಾಸಕಿಯಾಗಿ ಆಯ್ಕೆಯಾಗಲು ಮೂಡಿಗೆರೆ ಕ್ಷೇತ್ರದಲ್ಲಿರುವ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರು ಶ್ರಮಿಸಿದ್ದಾರೆ. ಅವರ ಗೆಲುವಿನಲ್ಲಿ ಎಲ್ಲ ಹಿರಿಯ ನಾಯಕರ ಕೊಡುಗೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದಲ್ಲದೇ ಪಕ್ಷದ ಹಿರಿಯ ನಾಯಕರ ವಿರುದ್ಧ ಮನಸೋಇಚ್ಛೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ದಲಿತ ಶಾಸಕಿಯಾಗಿರುವುದೇ ತಪ್ಪು, ನನ್ನ ಮೇಲೆ ಹಿರಿಯ ಮುಖಂಡರು ದಬ್ಬಾಳಿಕೆ ನಡೆಸುತ್ತಾ ಅವಮಾನ ಮಾಡುತ್ತಿದ್ದಾರೆ ಎಂದು ಸುಳ್ಳು ಅಪಪ್ರಚಾರ ನಡೆಸುತ್ತಿದ್ದಾರೆ. ಶಾಸಕಿ ನಯನಾ ಅವರ ಈ ಹೇಳಿಕೆ ಖಂಡನೀಯ ಎಂದರು.
ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿರಿಯ ಮುಖಂಡರ ನಿಯೋಗ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು, ಈ ವೇಳೆ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ವರಿಷ್ಠರಿಗೆ ಮನವರಿಕೆ ಮಾಡಲಾಗಿದೆ, ಆದರೆ ಶಾಸಕಿ ನಯನ ಮೋಟಮ್ಮ ಅವರು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಆ ನಿಯೋಗದಲ್ಲಿದ್ದವರು ನನ್ನ ವಿರೋಧಿಗಳು, ಚುನಾವಣಾ ಪೂರ್ವದಿಂದಲೂ ನನ್ನನ್ನು ವಿರೋಧ ಮಾಡಿಕೊಂಡು ಬಂದಿದ್ದಾರೆ, ನನ್ನ ತಾಯಿಯ ಸೋಲಿಗೂ ಇವರೇ ಕಾರಣ ಎಂದು ಹೇಳುತ್ತಿದ್ದಾರೆ ಎಂದರು.
ಇವರನ್ನು ಮುಂದಿಟ್ಟುಕೊಂಡು ನಾನೇಕೆ ರಾಜಕೀಯ ಮಾಡಲಿ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆ. ನಯನ ಅವರ ಇಂತಹ ದುರಹಂಕಾರಿ ಹೇಳಿಕೆಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದೇವೆ ಎಂದ ಅವರು, ಶಾಸಕಿಯಾದ ಬಳಿಕ ನಯನ ಅವರು ಕೋಮುವಾದಿ ಪ್ರಮೋದ್ ಮುತಾಲಿಕ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಲ್ಲದೇ ಅವರನ್ನು ಹೊಗಳುವ ಮೂಲಕ ಪಕ್ಷದ ಜಾತ್ಯತೀತ ಸಿದ್ಧಾಂತಕ್ಕೆ ಅಪಚಾರ ಮಾಡಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ನಯನ ಮೋಟಮ್ಮ ಅವರ ಗೆಲುವಿನಲ್ಲಿ ಕ್ಷೇತ್ರದ ಹಿರಿಯ ಮುಖಂಡರ ಪಾತ್ರ ಹೆಚ್ಚಿದೆ. ನಯನ ಅವರು ಈ ಮುಖಂಡರಿಂದ ಗೆದ್ದಿಲ್ಲ ಎನ್ನುವುದಾದರೇ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಮತ್ತೆ ಚುನಾವಣೆ ಎದುರಿಸಿ ಗೆದ್ದು ಬಂದಲ್ಲಿ, ನಾವು ಅವರಿಗೆ ಶರಣಾಗುತ್ತೇವೆ ಎಂದು ಸವಾಲು ಹಾಕಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಮೂಡಿಗೆರೆ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಶಾಸಕರಾದ ಎಲ್ಲರೂ ದಲಿತರೇ ಆಗಿದ್ದಾರೆ. ಈ ದಲಿತ ಶಾಸಕರ ಗೆಲುವಿನಲ್ಲಿ ಎಲ್ಲ ಜಾತಿ ಜನಾಂಗದವರ ಕೊಡುಗೆ ಇದೆ. ಮೇಲ್ವರ್ಗದವರ ಶ್ರಮ ಇಲ್ಲದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಅಸಾಧ್ಯ ಎಂದು ತಿಳಿಸಿದರು.
ನಯನ ಮೋಟಮ್ಮ ಶಾಸಕಿಯಾದ ಬಳಿಕ ಮೂಡಿಗೆರೆ ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿಗೆ ಒಮ್ಮೆಯೂ ಭೇಟಿ ನೀಡಿಲ್ಲ, ಪಕ್ಷದ ಹಿರಿಯ ಮುಖಂಡರೊಂದಿಗೆ ಸೌಜನ್ಯದಿಂದ ನಡೆದುಕೊಂಡಿಲ್ಲ, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿಲ್ಲ, ಪಕ್ಷದ ಹಿರಿಯ ಮುಖಂಡರ ಬಗ್ಗೆ ಮಾಧ್ಯಮ ಹೇಳಿಕೆ ನೀಡಿ, ಸೋಕಾಲ್ಡ್ ಸೀನಿಯರ್ಸ್ ಎಂದು ಹಿಯಾಳಿಸಿ ಅವಮಾನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಪಂ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಮಹಮ್ಮದ್ ಮಾತನಾಡಿ, ಪ್ರಮೋದ್ ಮುತಾಲಿಕ್ ಅಲ್ಪಸಂಖ್ಯಾತರ ಬಗ್ಗೆ ವಿಷಕಾರುವ ವ್ಯಕ್ತಿ, ಇಂತಹ ವ್ಯಕ್ತಿಯೊಂದಿಗೆ ಶಾಸಕಿ ನಯನ ವೇದಿಕೆ ಹಂಚಿಕೊಂಡಿದ್ದಲ್ಲದೇ ಅವರನ್ನು ಹೊಗಳಿ ಮಾತನಾಡಿರುವುದು ಅಲ್ಪಸಂಖ್ಯಾತ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನಯನ ಅವರ ತಾಯಿ ಮೋಟಮ್ಮ ಅವರು ಶಾಸಕಿಯಾಗಿ, ಮಂತ್ರಿಯಾಗಿ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವಲ್ಲಿ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕರು ಶ್ರಮಿಸಿದ್ದಾರೆ. ಸದ್ಯ ಅವರು ತಮ್ಮ ಮಗಳ ಮೇಲಿನ ಮಮಕಾರದಿಂದ ಇದನ್ನು ಮರೆತಂತಿದೆ. ಮಗಳ ತಪ್ಪನ್ನು ತಿದ್ದಿ ಬುದ್ಧಿ ಹೇಳಬೇಕಾದವರೂ ಮಗಳನ್ನೇ ಸಮರ್ಥಿಸಿಕೊಳ್ಳುವುದರಿಂದ ಪಕ್ಷಕ್ಕೆ ಭಾರೀ ನಷ್ಟ ಆಗಲಿದೆ ಎಂದು ವಿಷಾಧಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಿ.ಹೆಚ್.ಹಾಲಪ್ಪಗೌಡ, ಎಂ.ಪಿ.ಮನು, ಬಿ.ಎಸ್.ಜಯರಾಮ್, ಸಿ.ಕೆ.ಇಬ್ರಾಹಿಂ, ಆಯೂಬ್, ಮರಗುಂದ ಪ್ರಸನ್ನ, ಉಪ್ಪಳ್ಳಿ ಕೆ.ಭರತ್, ಅಹ್ಮದ್ ಭಾವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


