ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂಬ ಮಾತು ಅಕ್ಷರಶಃ ಸತ್ಯ. ಸರಕಾರಗಳ ಯೋಜನೆಗಳ ಅನುಷ್ಠಾನ ಮತ್ತು ಸಾರ್ವಜನಿಕರಿಗೆ ಸರಕಾರಗಳ ಯೋಜನೆ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವಲ್ಲಿ ಮಾಧ್ಯಮ ಕ್ಷೇತ್ರ ತನ್ನದೇಯಾದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾಕಾರಿ ಭಂವರ್ ಸಿಂಗ್ ಮೀನಾ ಹೇಳಿದರು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪ್ರೆಸ್‍ಕ್ಲಬ್‍ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ್ದವರು ಮಾತನಾಡಿದರು. ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳು, ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳು ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಿವೆ. ಈ ಮಾಧ್ಯಮಗಳ ಕಾರಣಕ್ಕೆ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತಾಗಿದೆ.ಮಾಧ್ಯಮ ಕ್ಷೇತ್ರವು ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವಿನ ಸೇತುವೆಯಾಗಿದೆ ಎಂದರು.
ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮ ಮತ್ತು ಆಡಳಿತ ವ್ಯವಸ್ಥೆ ಪರಸ್ಪರ ಸಮನ್ವಯದಿಂದ ಸಾಗಬೇಕು. ಆಡಳಿತ ವ್ಯವಸ್ಥೆ ಮತ್ತು ಜನರ ಸಮಸ್ಯೆಗಳ ಬಗ್ಗೆ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವ ಯಾವುದೇ ಸಕಾರಾತ್ಮಕ ಅಥವಾ ಟೀಕಾತ್ಮಕ ಸುದ್ದಿಗಳನ್ನು ಆಡಳಿತ ವ್ಯವಸ್ಥೆ ಪ್ರತಿದಿನ ಗಮನಿಸುತ್ತಿದೆ. ಇಂತಹ ಸುದ್ದಿಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಮಸ್ಯೆಗಳ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಒತ್ತು ನೀಡುತ್ತಿದೆ. ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರ ಆಡಳಿತ ವ್ಯವಸ್ಥೆಯನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಿಸಿದರು.
ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಸಮಾಜವನ್ನು ತಿದ್ದುವ ಮತ್ತು ಪ್ರಶ್ನಿಸುವ ನೈತಿಕತೆ ಇರುವುದು ಪತ್ರಕರ್ತರಿಗೆ ಮಾತ್ರ. ಗ್ರಾಮ ಪಂಚಾಯಿಂದ ಹಿಡಿದು ಪಾರ್ಲಿಮೆಂಟ್‍ವರೆಗೆ ಪತ್ರಿಕೆಗಳ ಸುದ್ದಿಗಳು ಸದ್ದು ಮಾಡುತ್ತವೆ. ಈ ಕಾರಣಕ್ಕೆ ಪತ್ರಿಕಾರಂಗ ಸಮಾಜದಲ್ಲಿ ತನ್ನದೇಯಾದ ಸ್ಥಾನಮಾನ ಹೊಂದಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ, ನೊಂದವರಿಗೆ ನ್ಯಾಯ ಕೊಡಿಸುವ, ಅಕಾರಿಗಳು, ರಾಜಕಾರಣಿಗಳ ತಪ್ಪುಗಳ ಬಗ್ಗೆ ಧ್ವನಿ ತಾಕತ್ತು ಇರುವುದು ಮಾಧ್ಯಮಗಳಿಗೆ ಮಾತ್ರ ಎಂದು ಅಭಿಪ್ರಾಯ ಪಟ್ಟರು.
ಹಿರಿಯ ಪತ್ರಕರ್ತ ದಿನೇಶ್ ಪಟವರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದೊಂದು ದಶಕದಿಂದ ಪ್ರೆಸ್‍ಕ್ಲಬ್ ಜನರ ಸಮಸ್ಯೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರೆಸ್‍ಕ್ಲಬ್‍ಗೆ ಸ್ವಂತ ಕಟ್ಟಡ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಜಿಲ್ಲಾಡಳಿತ ಸದ್ಯ ನಿವೇಶನ ಮಂಜೂರು ಮಾಡಿದ್ದು, ಈ ಸಂಬಂಧ ಇರುವ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಿಕೊಟ್ಟಲ್ಲಿ ಪ್ರೆಸ್‍ಕ್ಲಬ್ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದರು.
ಪ್ರೆಸ್‍ಕ್ಲಬ್ ಅಧ್ಯಕ್ಷ ಚಂದ್ರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಆರ್ಮನ್ ಮುಗ್ಲಿಂಗ್ ಆರಂಭಿಸಿದ ಮಂಗಳೂರು ಸಮಾಚಾರ ಎಂಬ ಕನ್ನಡ ಪತ್ರಿಕೆಯಿಂದಾಗಿ ರಾಜ್ಯದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಉಗಮವಾಗಿದೆ. ಅಂದಿನಿಂದ ಇಂದಿನವರೆಗೆ ಪತ್ರಿಕೋದ್ಯಮ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಅಪಾರ ಬದಲಾವಣೆ ಕಂಡಿದೆ. ಸದ್ಯ ಪತ್ರಿಕಾರಂಗ ಜಿಲ್ಲೆ, ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿತಿಗತಿಗಳ ಮೇಲೆ ಅಪಾರವಾದ ಪ್ರಭಾವ ಹಾಗೂ ಬದಲಾವಣೆ ತರುವ ನಿಟ್ಟಿನಲ್ಲಿ ದೊಡ್ಡಮಟ್ಟದ ಕೊಡುಗೆ ನೀಡುತ್ತಿದೆ. ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಜನರ ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂದ ಅವರು, ನೈತಿಕತೆ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮವನ್ನು ಎತ್ತಿ ಹಿಡಿಯುವ ಕೆಲಸವನ್ನು ಪತ್ರಕರ್ತರು ಮಾಡಬೇಕೆಂದರು.
ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಿ.ಟಿ.ತಿಪ್ಪೇರುದ್ರಪ್ಪ ಮಾತನಾಡಿ, ಪತ್ರಕರ್ತರು ಪ್ರಸಕ್ತ ದಿನಗಳಲ್ಲಿ ಕ್ರಿಯಾಶೀಲ ಹಾಗೂ ಅಧ್ಯಯನ ಶೀಲರಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮಾಧ್ಯಮ ಕ್ಷೇತ್ರ ಸಮಾಜದಲ್ಲಿ ತನ್ನದೇಯಾದ ಮಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದ ಅವರು, ಪತ್ರಿಕೆಗಳು ಮತ್ತು ದೃಶ್ಯಮಾಧ್ಯಮಗಳು ಯಾವಾಗಲು ನಿಷ್ಪಕ್ಷಪಾತವಾಗಿರಬೇಕು, ಸಮಾಜಮುಖಿಯಾಗಿರಬೇಕು. ನೊಂದವರು, ಧಮನಿತರು, ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು. ಪತ್ರಕರ್ತರಿಗೆ ರಾಜಕಾರಣಿಗಳು ನೆಪ ಮಾತ್ರ, ಅವರನ್ನು ಓಲೈಸುವ ಕೆಲಸ ಮಾಡದೇ, ತಪ್ಪುಗಳನ್ನು ಎತ್ತಿ ತೋರುವ ಮತ್ತು ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರೆಸ್‍ಕ್ಲಬ್ ಮಾಜಿ ಅಧ್ಯಕ್ಷ ಪಿ.ರಾಜೇಶ್ ಮಾತನಾಡಿದರು. ಎಸ್ಪಿ ಜಿತೇಂದ್ರಕುಮಾರ್ ದಯಾಮ, ಪ್ರೆಸ್‍ಕ್ಲಬ್ ಖಜಾಂಚಿ ಪುನೀತ್ ವೇದಿಕೆಯಲ್ಲಿದ್ದರು. ರೈತಸಂಘದ ಗುರುಶಾಂತಪ್ಪ, ಕಸಾಪ ತಾಲೂಕು ಅಧ್ಯಕ್ಷ ಲೋಕೇಶಪ್ಪ, ಎಸ್ಸಿ, ಎಸ್ಟಿ ದೌರ್ಜನ್ಯ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಅನಿಸಿಕೆ ಹಂಚಿಕೊಂಡರು. ಪ್ರೆಸ್‍ಕ್ಲಬ್ ಪ್ರ.ಕಾರ್ಯದರ್ಶಿ ಎನ್.ಕೆ.ಗೋಪಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮೂರ್ತಿ ಸ್ವಾಗತಿಸಿ, ಪತ್ರಕರ್ತ ಉಮೇಶ್ ವಂದಿಸಿದರು.


