ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ 21 ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಡಲ್ ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ದೆಹಲಿಗೆ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಹೀಗೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆಯೂ ಲಾಟಿ ಪ್ರಹಾರ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆತ್ಮಹತ್ಯೆ ಮಾಡಿಕೊಂಡಿರುವ 21 ವಿದ್ಯಾರ್ಥಿಗಳ ಕುಟುಂಬದ ನೋವು ಕೇಂದ್ರ ಸರ್ಕಾರವನ್ನು ತಟ್ಟೇತಟ್ಟುತ್ತದೆ. ಅಲ್ಲದೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಗಾಂಧಿ ಮಾರ್ಗದಲ್ಲಿ ಹೋರಾಟ ನಡೆಸುತ್ತಿರುವವರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಯಾರೇ ಪ್ರತಿಭಟನೆ ನಡೆಸಿದರು ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ದೂರಿದರು.
ವಿದ್ಯಾರ್ಥಿಗಳ ಹಾಗೂ ರೈತರ, ಜನ ಸಮಾನ್ಯರ ವಿರುದ್ಧವಾಗಿರುವ ಸರ್ಕಾರ ಕೇಂದ್ರದಲ್ಲಿದೆ. ಬಿಜೆಪಿ ಸರ್ಕಾರದ ವಿರುದ್ಧ ಯಾರೇ ಪ್ರತಿಭಟನೆ ನಡೆಸಿದರು ಅವರನ್ನು ಯಾವುದಾದರೂ ಒಂದು ಮಾರ್ಗದ ಮೂಲಕ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಜೊತೆಗೆ ಪ್ರಕರಣದ ಸಂಪೂರ್ಣ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ರವೀಶ್ ಕ್ಯಾತನಬೀಡು, ನಯಾಜ್ ಅಹಮದ್, ತನೋಜ್ ಕುಮಾರ್ ನಾಯ್ಡು ಮತ್ತಿತರರಿದ್ದರು.


