ರೈತರಿಗಾಗಿ ಸರಕಾರ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂದು ಶಾಸಕಿ ನಯನಾ ಮೊಟಮ್ಮ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ಶಾಸಕರ ಕಚೇರಿ ಎದುರು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಭತ್ತದ ಬೆಳೆ ವಿಮೆ ನೋಂದಣಿ ಹಾಗೂ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಜಾಗೃತಿ ಕುರಿತು ಮೂಡಿಗೆರೆ ಮತ್ತು ಕಳಸ ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಯೋಜಿಸಲಾಗಿರುವ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಬೆನ್ನೆಲುಬಾಗಿರುವ ರೈತರು ಇಂದು ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಕೀಟ ಹಾಗೂ ರೋಗಬಾಧೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ನೀಡುವ ಮಹತ್ವದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವರದಾನವಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಭತ್ತದ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುವುದು ಪ್ರತಿಯೊಬ್ಬ ರೈತನ ಜವಾಬ್ದಾರಿಯಾಗಿದೆ. ವಿಮೆ ಮಾಡಿಸಿಕೊಂಡರೆ ಪ್ರಕೃತಿ ವಿಕೋಪ ಅಥವಾ ಬೆಳೆ ಹಾನಿಯಾದ ಸಂದರ್ಭದಲ್ಲಿ ಪರಿಹಾರ ಪಡೆಯಲು ಅವಕಾಶವಿದೆ. ಭತ್ತದ ಬೆಳೆ ವಿಮೆ ನೋಂದಣಿ ಹಾಗೂ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲೆ ನೊಂದಣಿ ಮಾಡಿಸಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಪಿ.ಕೆ.ನಾಗೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಆರ್.ಯತೀಶ್, ಜಗನ್ನಾಥ್ ಗೌಡ, ಚಂದ್ರಶೇಖರ್ ಹಾಗೂ ಕೆಡಿಪಿ ಸದಸ್ಯ ರವಿ ಕುನ್ನಳ್ಳಿ, ಸಹಾಯಕ ಕೃಷಿ ನಿರ್ದೇಶಕಿ ಸುಮ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ದಿವ್ಯ, ಕೃಷಿ ಅಧಿಕಾರಿ ಅಮರೇಶ್, ಅನನ್ಯ, ರಶ್ಮಿ ಮತ್ತಿತರರಿದ್ದರು.


