October 30, 2026
;
balika

 

 

ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೂಡಿಗೆರೆ ಇಲ್ಲಿ ಗುರುವಾರ “ಸುರಕ್ಷಿತ ಬಾಲ್ಯ ಅಭಿಯಾನ” ದಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಶ್ರೀಮತಿ ಸುರಕ್ಷಾ ಕೆ ಕೆ, ನ್ಯಾಯಾಧೀಶರು, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ ಎಮ್ ಎಫ್ ಸಿ, ಮೂಡಿಗೆರೆ. ಇವರು ಉದ್ಘಾಟಿಸಿದರು POCSO ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಅಸುರಕ್ಷಿತ ಸಂದರ್ಭಗಳು ಬಂದಾಗ ನಿರ್ಭೀತಿಯಿಂದ ಎದುರಿಸುವ ಧೈರ್ಯ ಮಾಡಬೇಕು. ತಮಗೆ ಯಾವುದೇ ಅನಾನುಕೂಲವಾದರೆ ತಕ್ಷಣ ಸಂಬಂಧಿಸಿದ ಇಲಾಖೆಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ. ಮಾಹಿತಿಯನ್ನು ಗೌಪ್ಯವಾಗಿಡುವುದು ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ವಕೀಲರಾದ ಶ್ರೀಮತಿ ಕೆ ವಿಶಾಲ ಇವರು ಉಪನ್ಯಾಸ ನೀಡಿ ಹದಿನೆಂಟು ವರ್ಷ ವಯೋಮಾನದೊಳಗಿನ ಮಕ್ಕಳು (ಬಾಲಕ ಮತ್ತು ಬಾಲಕಿಯರು) ಲೈಂಗಿಕ ದೌರ್ಜನ್ಯಕ್ಕೊಳಗಾಗುವುದು ಹಾಗೂ ಮದುವೆಯಾಗುವ  ಪ್ರಕರಣಗಳು POCSO ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ. ಹದಿನೆಂಟು ವರ್ಷ ವಯಸ್ಸಿಗೆ ಮುನ್ನವೇ ಸ್ವ-ಇಚ್ಛೆಯಿಂದ ಪರಸ್ಪರ ಸಹಮತದ ಮದುವೆಯೂ ಕಾನೂನುಬಾಹಿರವಾಗುತ್ತದೆ ಎಂದರು.

ವಿದ್ಯಾರ್ಥಿಗಳು ತಾವು ಕಲಿಯುವ ಶಾಲೆಯಲ್ಲಿ, ಪ್ರಯಾಣಿಸುವಾಗ ಅಥವಾ ಬದುಕುವ ಪರಿಸರದಲ್ಲಿ ಅಪರಿಚಿತರ ಹಿನ್ನೆಲೆ ತಿಳಿಯದೆ ನಿತ್ಯದ ಒಡನಾಟದಿಂದ ಆತ್ಮೀಯರಾಗುವುದು ಸಾಮಾನ್ಯವಾಗಿದೆ. ಇಂತಹ ವ್ಯಕ್ತಿಗಳಿಂದ ಪದೇಪದೇ ತಪ್ಪಾದ ಸ್ಪರ್ಶಗಳು(BAD TOUCH), ಉನ್ಮಾದಗೊಳಿಸುವ ತಿಂಡಿ ತಿನಿಸುಗಳು, ಗಿಫ್ಟ್ ಗಳನ್ನು ನೀಡುವುದು ಕಂಡುಬಂದರೆ ಪೋಷಕರಿಗೆ, ಮಕ್ಕಳ ರಕ್ಷಣಾ ಘಟಕಕ್ಕೆ ಅಥವಾ ಶಿಕ್ಷಕರಿಗೆ ಮಾಹಿತಿ ನೀಡಬೇಕು. ಇಂತಹ ವ್ಯಕ್ತಿಗಳು ದುರುದ್ದೇಶ ಹೊಂದಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಜಾಗ್ರತೆಯಿಂದ ಇರಬೇಕು ಮತ್ತು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಮತ್ತು ಇತರೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.

ವೈಯಕ್ತಿಕ ದ್ವೇಷದಿಂದ ಸುಳ್ಳು ದೂರನ್ನು ನೀಡುವುದು ನಮ್ಮ ರಕ್ಷಣೆಗೆ ರೂಪಿಸಿದ ಕಾನೂನನ್ನು ದುರ್ಬಲಗೊಳಿಸುವ ಪ್ರಯತ್ನವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪೂರ್ಣೇಶ ಎಸ್ ಮಾತನಾಡಿ ಮಾದಕ ವಸ್ತುಗಳ ಸರಬರಾಜುದಾರರು ಮತ್ತು ಲೈಂಗಿಕ ದೌರ್ಜನ್ಯದ ದುರುದ್ದೇಶ ಹೊಂದಿರುವ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ಅವಲಂಬಿಸಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅತ್ಯಗತ್ಯವಾಗಿದೆ. ಮಾನ್ಯ ನ್ಯಾಯಾಧೀಶರು ಮತ್ತು ವಕೀಲರು    ನೀಡಿದ ಮಾಹಿತಿಯನ್ನು ಅಗತ್ಯ ಸಂದರ್ಭದಲ್ಲಿ ತಮ್ಮ ಮತ್ತು ನೆರೆ ಹೊರೆಯವರ ಸುರಕ್ಷತೆಗಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮೂಡಿಗೆರೆ ವಕೀಲರ ಸಂಘದ ಕಾರ್ಯದರ್ಶಿ ಶ್ರೀಮತಿ ಅರ್ಪಿತಾ ಕೆ ಎಸ್ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಶ್ರೀ ಕರಿಯಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ಕೃಷ್ಣಮೂರ್ತಿ ರಾಜೇ ಅರಸ್ ನಿರೂಪಿಸಿ ವಂದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

 

 

Leave a Reply

Your email address will not be published. Required fields are marked *