ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಸಮೀಪದ ಹಾಂದಿಯ ಬಾರ್ಗಲ್ ಗ್ರಾಮದ ಮಾನಸಿಕ ಅಸ್ವಸ್ಥ ಮಹಮ್ಮದ್ ಅಲಿ ಎಂಬುವರನ್ನು ಮೂಡಿಗೆರೆ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ವತಿಯಿಂದ ಆಶ್ರಮಕ್ಕೆ ಭಾನುವಾರ ಸೇರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಮಾತನಾಡಿ ಪ್ರಸ್ತುತ ಯುವಕನ ಕುಟುಂಬ ಹಾವೇರಿ ಮೂಲದವರಾಗಿದ್ದು ಹಾಂದಿ ಬಾರ್ಗಲ್ ಗ್ರಾಮಕ್ಕೆ ಬಂದು 20 ವರ್ಷಗಳು ಆಗಿದೆ. ಯುವಕ ಮಹಮ್ಮದ್ ಅಲಿ (18) ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥನಾಗಿದ್ದು, ತಂದೆ ಮೃತರಾಗಿದ್ದು ತಾಯಿ ಖುತೀಜಾಬಿ ಕೂಲಿ ಕೆಲಸ ಮಾಡುತ್ತಾ ಮಗನನ್ನು ನೋಡಿಕೊಳ್ಳುತ್ತಿತ್ತು.
ಒಂದು ವರ್ಷಗಳ ಹಿಂದೆ ಮಹಮ್ಮದ್ ಅಲಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ನಡೆಯಲು ಕೂಡ ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದ್ದು, ಪೊಲೀಸ್ ಇಲಾಖೆ ಮತ್ತು ಸ್ಥಳೀಯರಾದ ಮೂರ್ತಿ ಎಂಬುವರ ಮೂಲಕ ಮಾಹಿತಿ ತಿಳಿದು ಬಂದ ಹಿನ್ನೆಲೆ ಭಾನುವಾರ ಮಹಮದ್ ಅಲಿಯನ್ನು ತುಮಕೂರು ಶಾರದಾಂಬ ಆಶ್ರಮಕ್ಕೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.



