November 2, 2026
;
10Mudigere2A

 

 

ಕಾರ್ಮಿಕ ವರ್ಗದ ಸುಧೀರ್ಘ ಹೋರಾಟದ ಹಿನ್ನೆಲೆಯಲ್ಲಿ ಜಾರಿಗೆ ಬಂದ 44 ಕಾರ್ಮಿಕ ಕಾಯ್ದೆಯನ್ನು ಕೈಬಿಟ್ಟು, 29 ಕಾರ್ಮಿಕ ಕಾನೂನು ಸೇರ್ಪಡೆಗೊಳಿಸಿ, ಕೇಂದ್ರ ಸರಕಾರ 4 ಕಾರ್ಮಿಕ ಸಂಹಿತೆ ಮಾಡಿ 64.33 ಕೋಟಿ ಕಾರ್ಮಿಕರ ಮೇಲೆ ಗದ ಪ್ರಹಾರ ನಡೆಸಲು ಮುಂದಾಗಿದೆ ಎಂದು ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ದೂರಿದರು.

ಅವರು ಸೋಮವಾರ ಟಿಯುಸಿಐ ಮತ್ತು ರೈತ ಸಂಘದ ವತಿಯಿಂದ ಕಾರ್ಮಿಕ ರೈತರ ಹಕ್ಕುಗಳ ರಕ್ಷಣೆಗಾಗಿ ಮೂಡಿಗೆರೆ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೇಂದ್ರ ಸರಕಾರ ಕಾರ್ಮಿಕರ ಪರವಾಗಿದ್ದ ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸದೇ ವೇತನ, ಕೈಗಾರಿಕಾ, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗಿಕ ಸುರಕ್ಷಣೆಯ ಹೊಸ ಕಾನೂನು ಅಂಗೀಕರಿಸಿ ಕಾರ್ಮಿಕ ರೈತರಿಗೆ ದ್ರೋಹ ಎಸಗಲಾಗಿದೆ. ಇದು ಜಾರಿಯಾದರೆ ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳನ್ನು ಕುಂಠಿತಗೊಳಿಸಿ, ಟ್ರೇಡ್ ಯೂನಿಯನ್‍ಗಳ ಮುಕ್ತಗೊಳಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸುವ ತಂತ್ರವಾಗಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಜಿ.ಶಂಕರ್ ಮಾತನಾಡಿ, ಕಾರ್ಮಿಕ ವಿರೋಧಿಯಾಗಿರುವ 4 ಕಾರ್ಮಿಕ ಸಂಹಿತೆ ರದ್ದು ಮಾಡಬೇಕು. 29 ಕಾರ್ಮಿಕ ಕಾನೂನು ಜಾರಿಯಾಗಬೇಕು.ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಯಥಾಸ್ಥಿತಿ ಮುಂದುವರೆಯಬೇಕು. ಅಮೆರಿಕ ದೇಶದೊಂದಿಗಿನ ಮುಕ್ತ ವ್ಯಾಪಾರ ನೀತಿಯನ್ನು ಕೂಡಲೇ ರದ್ದುಗೊಳಿಸಬೇಕು. ಸರಕಾರಿ ಉದ್ದಿಮೆಗಳ ಮಾರಾಟ ಹಾಗೂ ಖಾಸಗಿಕರಣವನ್ನು ನಿಲ್ಲಿಸಬೇಕು. ಗುತ್ತಿಗೆ ಪದ್ಧತಿ ನಿಷೇಧಿಸಿ ಮತ್ತು ಎಲ್ಲಾ ಸಿಬ್ಬಂದಿಗಳು ಹಾಗೂ ಕಾರ್ಮಿಕರನ್ನು ಖಾಯಂಗೊಳಿಸಬೇಕು. ತೋಟದ ಕಾರ್ಮಿಕರ ಹಕ್ಕುಗಳನ್ನು ಮತ್ತು ಸೂಕ್ತ ವಸತಿ ಆರೋಗ್ಯ ಭದ್ರತೆ ನೀಡಬೇಕು. ಕಾರ್ಮಿಕ ಮಕ್ಕಳ ಹಿತರಕ್ಷಣೆಗಾಗಿ ಸರಕಾರಿ ಶಾಲೆಗಳನ್ನು ರಕ್ಷಿಸಬೇಕು. ದುಡಿಮೆಗೆ ಸಮಾನ ವೇತನ ಸಿಗಬೇಕು. ಮಲೆನಾಡಿನ ವಸತಿ ರಹಿತರಿಗೆ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 20 ಎಕರೆ ನಿವೇಶನಕ್ಕೆ ಭೂಮಿ ಮೀಸಲಿಡಬೇಕೆಂದು ಒತ್ತಾಯಿಸಿದರು.

ಬಳಿಕ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು. ಟಿಯುಸಿಐ ಕಾರ್ಯದರ್ಶಿ ಗೋಪಾಲ, ಜಿಲ್ಲಾ ಸಮಿತಿ ಸದಸ್ಯರಾದ ಪುಟ್ಟಸ್ವಾಮಿ, ಸುರೇಶ್, ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಂದೀಪ್, ಕೃಷ್ಣ, ಮೇರಿ, ಅಶ್ವಿನಿ, ರಮಿಜಾ, ಸವಿತಾ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *