November 2, 2026
;
10Mudigere3A

 

 

ಮೂಡಿಗೆರೆ ಎಂಜಿಎಂ ಆಸ್ಪತ್ರೆ ಆವರಣದಲ್ಲಿ ನಮ್ಮ ಸಂಸ್ಥೆಯಿಂದ ಅನಧೀಕೃತವಾಗಿ ಜನೌಷಧಿ ಅಂಗಡಿ ನಡೆಸುತ್ತಿಲ್ಲ. ಯಾವ ಪ್ರಭಾವಿ ರಾಜಕಾರಣಿಗಳ ಆಶ್ರಯದಲ್ಲೂ ನಡೆಸುತ್ತಿಲ್ಲವೆಂದು ಟಿಎಪಿಸಿಎಂಎಸ್ ಅಧ್ಯಕ್ಷ ಕಲ್ಲೇಶ್ ಸ್ಪಷ್ಟಪಡಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಜಿಎಂ ಆಸ್ಪತ್ರೆ ಆವರಣದಲ್ಲಿ ಅನುಮತಿ ಪಡೆಯದೇ ಜನೌಷಧಿ ನಡೆಸುತ್ತಿದ್ದಾರೆ. ಬ್ರಾಂಡೆಡ್ ಔಷಧಿ ಮಾರಾಟ ಮಾಡುತ್ತಿರುತ್ತಾರೆ. ವೈದ್ಯರಿಗೆ ಕಮಿಷನ್ ನೀಡುತ್ತಾರೆ. ಅಲ್ಲದೇ ಪ್ರಭಾವಿ ರಾಜಕಾರಣಿಗಳ ಆಶ್ರಯದಿಂದ ಅಂಗಡಿ ನಡೆಸುತ್ತಾರೆಂದು ಕೆಲ ಮಾಧ್ಯಮದಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ.

ನಮ್ಮ ಸಂಸ್ಥೆಯು ಎಂಜಿಎಂ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು ಹಾಗೂ ರೋಗಿಗಳ ಅನುಕೂಲಕ್ಕಾಗಿ 1984 ರಿಂದಲೂ ಔಷಧಿ ಅಂಗಡಿ ನಡೆಸಿಕೊಂಡು ಬರುತ್ತಿರುತ್ತೇವೆ. ರಾತ್ರಿ ಸಮಯದಲ್ಲಿ ಬರುವ ರೋಗಿಗಳಿಗೆ ತುರ್ತು ಔಷಧಿ ದೊರೆಯದೇ ಸಮಸ್ಯೆ ಆಗುತ್ತಿರುವುದನ್ನು ಮನಗೊಂಡು 1994 ರಿಂದ ಇಲ್ಲಿಯವರೆಗೂ ರಾತ್ರಿಯೂ ಕೂಡ ಔಷಧಿ ದೊರಕುವ ಸೌಲಭ್ಯ ಒದಗಿಸಲಾಗಿದೆ. ಇದರಿಂದ ರೋಗಿಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರು.

ಖಾಸಗಿ ಔಷಧಿ ಅಂಗಡಿಯವರು ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಇದು ಖಾಸಗಿ ಔಷಧಿ ಅಂಗಡಿಯಾಗಿದ್ದು, ತೆರವುಗೊಳಿಸಬೇಕೆಂದು ದಾವೆ ಹೂಡಿದ್ದರು. ಆದರೆ ರೋಗಿಗಳಿಗೆ ಅನುಕೂವಾಗುತ್ತಿರುವುದು ಹಾಗೂ ಸಂಸ್ಥೆಯಿಂದ ಸರಕಾರಕ್ಕೆ ಶೇ.5ರಷ್ಟು ಲಾಭಾಂಶ ಪಾವತಿಸುತ್ತಿದ್ದರಿಂದ ನ್ಯಾಯಾಲಯ ದೂರುದಾರ ಅರ್ಜಿ ವಜಾ ಮಾಡಿದೆ.

ನಮ್ಮ ಔಷಧಿ ಶಾಖೆಯಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಇರುವ ಔಷದಿ ಅಂಗಡಿಯಂತೆ ಜನರಿಕ್ ಔಷಧಿಯನ್ನು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜನರಿಕ್ ಔಷಧಿ ಸಿಗದೇ ಇದ್ದ ಮಾತ್ರೆಗಳನ್ನು ಬ್ರಾಂಡೆಡ್ ಕಂಪನಿಯ ಔಷಧಿಗಳನ್ನು ತರಿಸುತ್ತಿರುತ್ತೇವೆ. ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಬಾರದಿದ್ದರೂ ಕೂಡ, ರೋಗಿಗಳ ಅನುಕೂಲಕ್ಕಾಗಿ ತೆರೆದಿರುವ ಔಷದಿ ಕೇಂದ್ರದ ವಿರುದ್ಧ ಕೆಲ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಾ ಜನರ ಮತ್ತು ಮಾಧ್ಯಮದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.

ಟಿಎಪಿಸಿಎಂಎಸ್ ಉಪಾಧ್ಯಕ್ಷ ಗಣೇಶ್, ನಿರ್ದೇಶಕರಾದ ಗಜೇಂದ್ರ ಕೊಟ್ಟಿಗೆಹಾರ, ಚಂದ್ರೇಶ್ ಮಗ್ಗಲಮಕ್ಕಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *