ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಮೃತ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೇಲ್ವಿನ್ ಲಸ್ರಾದೋ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ಹನೂರು ತಾಲ್ಲೂಕಿನ ನಿವಾಸಿಗಳಾದ ಆಂಟನಿ ಸ್ವಾಮಿ, ಜಾನ್ ರೋಸ್ ಪೀಟರ್ ಮತ್ತು ಆಂಟನಿ ಕುಮಾರ್ ಅವರು ಭಾನುವಾರ ಮುಂಜಾನೆ ಹನೂರು ವನ್ಯಜೀವಿ ವಿಭಾಗದ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಹೇಳಿದರು.
ಅರಣ್ಯ ಇಲಾಖೆ ಸಿಬ್ಬಂದಿಯ ಅತಿರೇಕದ ಕ್ರಮದಿಂದ ಅಮಾಯಕ ಜೀವಗಳು ಬಲಿಯಾಗಿದ್ದು, ಮೂರು ಕುಟುಂಬಗಳನ್ನು ಅನಾಥವಾಗಿಸಿದೆ. ಯಾವುದೇ ತಪ್ಪು ಕಂಡು ಬಂದಿದ್ದರೂ ಅವರನ್ನು ಬಂಧಿಸಿ ಕಾನೂನು ಪ್ರಕ್ರಿಯೆ ಅನುಸರಿಸಬೇಕಿತ್ತು. ಆದರೆ ನೇರವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಅರಣ್ಯ ಇಲಾಖೆ ಸಿಬ್ಬಂದಿಯ ಈ ಅಮಾನವೀಯ ವರ್ತನೆ ಕ್ರೈಸ್ತ ಸಮುದಾಯಕ್ಕೆ ತೀವ್ರ ಆಘಾತ ತಂದಿದೆ ಎಂದು ತಿಳಿಸಿದರು.
ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಪ್ರವೇಶ, ಬೇಟೆ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ನಮ್ಮ ಸಮುದಾಯ ಎಂದಿಗೂ ಸಮರ್ಥಿಸುವುದಿಲ್ಲ. ಆದರೆ ಇಂತಹ ಆರೋಪಗಳೇ ಯಾರನ್ನಾದರೂ ಗುಂಡಿಕ್ಕಿ ಕೊಲ್ಲಲು ಸಮರ್ಥನೆಯಾಗುವುದಿಲ್ಲ. ಈ ಘಟನೆಯ ಸತ್ಯಾಂಶ ಹೊರ ತರುವ, ಜವಾಬ್ದಾರಿ ನಿಗಧಿಪಡಿಸುವ ಮತ್ತು ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಅತ್ಯಗತ್ಯವಾಗಿದೆ ಎಂದರು.
ಘಟನೆಯ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಜೀವಕ್ಕೆ ತಕ್ಷಣದ ಅಪಾಯವಿತ್ತೇ ಎಂಬ ಪ್ರಶ್ನೆಗೂ ಸ್ವತಂತ್ರ ತನಿಖೆಯ ಮೂಲಕವೇ ಉತ್ತರ ದೊರೆಯಬೇಕು. ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿಯ ಪಾತ್ರವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.


