ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲ್ಲೂಕಿನ ನೂರಾರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಮುಖ ಮುಂಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮೂಡಿಗೆರೆ ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಪ್ರಮುಖ ಆಕಾಂಕ್ಷಿಯಾಗಿದ್ದ ಯುವ ಮುಖಂಡ, ಉದ್ಯಮಿ ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ಈ ಪಕ್ಷಾಂತರ ಪ್ರಕ್ರಿಯೆ ನಡೆದಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹಲವು ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಬಾವುಟ ಹಿಡಿದಿದ್ದಾರೆ.
ವಿಜಯಕುಮಾರ್ ಅವರೊಂದಿಗೆ ಭಜರಂಗದಳದ ಮಾಜಿ ಜಿಲ್ಲಾ ಸಂಚಾಲಕ ತುಡುಕೂರು ಮಂಜು, ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಂಜು ಸೇರಿದಂತೆ ಬಿಜೆಪಿ ಯುವ ಮೋರ್ಚಾ ಮಂಡಲದ ಪ್ರಮುಖ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್-ಬಿಜೆಪಿಯ ಹಲವು ಸಕ್ರಿಯ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಬುಧವಾರ ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಪುತ್ರ, ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಅವರ ಸಮ್ಮುಖದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಕಾರ್ಯಕ್ರಮಕ್ಕಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ನೂರಾರು ಕಾರ್ಯಕರ್ತರು ರಾಜಧಾನಿ ಬೆಂಗಳೂರಿಗೆ ತೆರಳಿ,. ಜೆಡಿಎಸ್ ಕಛೇರಿಯಲ್ಲಿ ಜಮಾಯಿಸಿ ಪಕ್ಷಕ್ಕೆ ಸೇರ್ಪಡೆಯಾದ ವಿಜಯಕುಮಾರ್ ಮತ್ತು ಅವರ ಬೆಂಬಲಿಗರನ್ನು ಸ್ವಾಗತಿಸಿದರು.
ಇದರೊಂದಿಗೆ ಮೂಡಿಗೆರೆ ಜೆಡಿಎಸ್ ಪಾಳಯದಲ್ಲಿ ಹೊಸ ಹುರುಪಿ ಬಂದಿದೆ. ಬಿಜೆಪಿ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಹೊಂದಿದ್ದು, ವಿಜಯಕುಮಾರ್ ಅವರು ಮೈತ್ರಿ ಆಭ್ಯರ್ಥಿಯಾಗಿ ಜೆಡಿಎಸ್ ನಿಂದ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವ ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಜೆಡಿಎಸ್ ಸೇರ್ಪಡೆ ಹೊಂದಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.


