ಉತ್ತರ ನೇಪಾಳದ ರಸುವಾ ಜಿಲ್ಲೆಗೆ ಬುಧವಾರ ಬೆಳಗ್ಗೆ ಅಪ್ಪಳಿಸಿದ ಭೀಕರ ಪ್ರವಾಹವು ವ್ಯಾಪಕ ವಿನಾಶ ಉಂಟು ಮಾಡಿದೆ. ಈವರೆಗೂ 150 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, 500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ.
ಟಿಬೆಟ್ ಗಡಿಯ ಬಳಿಯ ನೇಪಾಳದ ರಸುವಾ ಜಿಲ್ಲೆಯಲ್ಲಿ ಬೆಳಗ್ಗೆ ಭೋಟೆ ಕೋಶಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು ಭಾರಿ ಅನಾಹುತ ಸೃಷ್ಠಿಯಾಗಿದೆ. ಪ್ರವಾಹದ ರಭಸಕ್ಕೆ ಗ್ರಾಮಗಳು, ಮಾರುಕಟ್ಟೆ ಪ್ರದೇಶಗಳು, ಸೇತುವೆಗಳು, ರಸ್ತೆಗಳು ಹಾಗೂ ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯ ಕೊಚ್ಚಿಹೋಗಿದ್ದು, ಸಾವು ನೋವುಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಬಾಗ್ಮತಿ ಪ್ರಾಂತ್ಯ ಪೊಲೀಸ್ ಕಚೇರಿಯ ವಕ್ತಾರ ರಾಜೇಂದ್ರ ಪ್ರಸಾದ್ ಧಮಾಲಾ ತಿಳಿಸಿದ್ದಾರೆ.
ವಿದೇಶಿ ಪ್ರಜೆಗಳು ಸೇರಿ ಒಟ್ಟು ನೂರಾರು ಮಂದಿ ನಾಪತ್ತೆ
ಘಟನೆಯಲ್ಲಿ ವಿದೇಶಿ ಪ್ರಜೆಗಳು ಸೇರಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ಹೇಳಿದೆ. ನಾಪತ್ತೆಯಾದ ಪ್ರವಾಸಿಗರಲ್ಲಿ 100ಕ್ಕೂ ಅಧಿಕ ಮಂದಿ ಭಾರತ ಮೂಲದವರು ಎನ್ನಲಾಗಿದೆ. ಈ ಪಟ್ಟಿ ಪ್ರಾಥಮಿಕವಾಗಿದ್ದು, ಟೂರ್ ಸಂಸ್ಥೆಗಳು, ಮಾರ್ಗದರ್ಶಕರು, ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಮಂಡಳಿ ತಿಳಿಸಿದೆ. ಪರಿಶೀಲನೆ ಪೂರ್ಣಗೊಳ್ಳುವವರೆಗೆ ನಾಪತ್ತೆಯಾದವರ ಕುಟುಂಬಗಳು ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಮಂಡಳಿ ಮನವಿ ಮಾಡಿದೆ. ನಾಪತ್ತೆಯಾಗಿರುವ ಭಾರತದ ಪ್ರವಾಸಿಗರಲ್ಲಿ ಬಹುತೇಕರು ತಮಿಳುನಾಡು ಮೂಲದವರು ಎನ್ನಲಾಗಿದೆ.
ಕೈಲಾಸ ಮಾನಸ ಸರೋವರಕ್ಕೆ ತೆರಳುತ್ತಿದ್ದ ಪ್ರವಾಸಿಗರು ನಾಪತ್ತೆ
ಪ್ರವಾಹದಲ್ಲಿ ನಾಪತ್ತೆಯಾದವರಲ್ಲಿ ಹೆಚ್ಚಿನ ಸಂಖ್ಯೆಯವರು ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ಟಿಬೆಟ್‌ಗೆ ತೆರಳುತ್ತಿದ್ದ ಪ್ರವಾಸಿಗರು ಎನ್ನಲಾಗಿದೆ. ಕಠ್ಮಂಡು ಮೂಲದ ಟಚ್ ಕೈಲಾಸ ಟ್ರಾವೆಲ್ಸ್ ಆ್ಯಂಡ್ ಟೂರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಾಶು ಕುಮಾರ್ ಅಧಿಕಾರಿ ಅವರ ಪ್ರಕಾರ, 93 ನೇಪಾಳಿ ಪ್ರಜೆಗಳು ಸೇರಿದಂತೆ 390 ಮಂದಿ ಬುಧವಾರ ಗಡಿ ದಾಟಲು ನಿರ್ಧರಿಸಿದ್ದರು. ಕೆಲವರನ್ನು ಹೊರತುಪಡಿಸಿ, ಮಧ್ಯಾಹ್ನ 3ರ ವೇಳೆಗೆ ನಾವು ಪ್ರವಾಸಿಗರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ನೇಪಾಳದ ಟ್ರೆಕ್ಕಿಂಗ್ ಏಜೆನ್ಸಿಗಳ ಸಂಘದ ಅಧ್ಯಕ್ಷ ಸಾಗರ್ ಪಾಂಡೆ, ಪ್ರವಾಸಿಗರನ್ನು ಸಂಪರ್ಕಿಸಿ ಅವರ ಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿರುವ ಈ ಮಹಾದುರಂತದ ಸಂದರ್ಭದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳು ನೇಪಾಳದ ನೆರವಿಗೆ ಮುಂದಾಗಿವೆ.



