ಹಾಸನ ಜಿಲ್ಲೆಯ ಸಕಲೇಶಪುರದ ಲಾಡ್ಜ್‌ವೊಂದರಲ್ಲಿ ಬೆಂಗಳೂರಿನ 23 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ.
ವರ್ಷಾ ಎಂದು ಗುರುತಿಸಲಾದ ಈ ಯುವತಿ, ಸೆಪ್ಟೆಂಬರ್ 11 ರಂದು ತಮ್ಮ ಸೋದರಸಂಬಂಧಿ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಸಕಲೇಶಪುರ ಭಾಗಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಈ ಮೂವರು ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಹಲವೆಡೆ ಸುತ್ತಾಡಿದ್ದರು. ಅಲ್ಲದೇ ಸಕಲೇಶಪುರ ತಾಲ್ಲೂಕು ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ನಲ್ಲಿ ಒಂದೇ ರೂಂನಲ್ಲಿ ಮೂವರು ತಂಗಿದ್ದರು.
ಮಂಗಳವಾರ ಲಾಡ್ಜ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಮೃತಪಟ್ಟಿದ್ದಾಳೆ. ಸ್ನಾನಕ್ಕೆ ಹೋಗುವ ಮುನ್ನ ಆಕೆ ಚಾಕೊಲೇಟ್ ತಿಂದಿದ್ದರು. ಸ್ನಾನಗೃಹದ ಕಡೆಗೆ ನಡೆಯುತ್ತಿದ್ದಾಗ ಆಕೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು ಎಂಬ ಮಾಹಿತಿ ಸಿಕ್ಕಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ತಿಳಿಸಿದ್ದಾರೆ. ಪ್ರವಾಸದ ವೇಳೆ ಅವರೊಂದಿಗೆ ಇದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರಿನಿಂದ ಸುಮಾರು 190 ಕಿಲೋಮೀಟರ್ ದೂರದಲ್ಲಿರುವ ಹಾಸನಕ್ಕೆ ವರ್ಷಾ ತೆರಳಿದ್ದ ವಿಷಯ ಅವರ ಪೋಷಕರಿಗೆ ತಿಳಿದಿತ್ತು. ಅವರ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸಾವಿಗೆ ನಿಖರ ಕಾರಣವನ್ನು ತಿಳಿಯಲು ವರ್ಷಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


