September 19, 2026
;
suddi-3

 

 

12 ವರ್ಷಗಳಿಂದ ನಿರಂತರ ಲಾಭ 2025-26ನೇ ಮಾರ್ಚ್ ಅಂತ್ಯಕ್ಕೆ ಶೇ.98.05 ರಷ್ಟ ಸಾಲ ವಸೂಲಾತಿಯೊಂದಿಗೆ ರೂ. 6.87 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ 12 ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಿರುವ ರಾಜ್ಯದ ಅತ್ಯುತ್ತಮ ಬ್ಯಾಂಕುಗಳಲ್ಲಿ ಒಂದಾಗಿ ಏಳನೇ ಸ್ಥಾನದಲ್ಲಿದೆ ಎಂದು ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಟಿ.ರವಿ ಹೇಳಿದರು.

ಅವರು ಇಂದು ಬ್ಯಾಂಕಿನ ನೂತನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1955 ರಲ್ಲಿ 1430 ರೂ.ಗಳ ಪ್ರಾರಂಭಿಕ ಠೇವಣಿಯೊಂದಿಗೆ ಆಸ್ತಿತ್ವಕ್ಕೆ ಬಂದಿದ್ದು, ಪ್ರಸ್ತುತ 28 ಶಾಖೆಗಳು, 129 ಸದಸ್ಯ ಪ್ರಾಥಮಿಕ ಸಹಕಾರ ಸಂಘಗಳು ಹಾಗೂ 267 ಇತರೆ ಸಂಘಗಳು ಒಟ್ಟು 396 ಸದಸ್ಯ ಸಹಕಾರ ಸಂಘಗಳ ಮೂಲಕ ಕೃಷಿ ಮತ್ತು ಕೃಷಿಯೇತರ ಸಾಲ ನೀಡುತ್ತಾ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಣಕಾಸಿನ ಸೇವೆಯನ್ನು ನೀಡುವುದರ ಮೂಲಕ ಉತ್ತಮವಾದ ವ್ಯವಹಾರವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

2025-26ನೇ ಸಾಲಿನಲ್ಲಿ ಶಾಸನ ಬದ್ದ ಲೆಕ್ಕ ಪರಿಶೋಧನೆ ಹಾಗೂ ನಬಾರ್ಡ್ ನಡೆಸಿದ ತಪಾಸಣೆಯಲ್ಲಿ ನಮ್ಮ ಬ್ಯಾಂಕ್ ಸತತವಾಗಿ ಎ ವರ್ಗೀಕೃತ ಶ್ರೇಣಿಯನ್ನು ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

2025-26 ನೇ ಸಾಲಿನ ಅಂತ್ಯಕ್ಕೆ ರೂ.65.99 ಕೋಟಿ ಷೇರು ಬಂಡವಾಳ ಸಂಗ್ರಹಿಸಿ 2.24 ಲಕ್ಷಕ್ಕೂ ಹೆಚ್ಚಿನ ಠೇವಣಿದಾರರ ಮೂಲಕ ರೂ. 1568.53 ಕೋಟಿ ವಿವಿಧ ರೀತಿಯ ಠೇವಣಿ ಸಂಗ್ರಹಣೆ ಮಾಡಲಾಗಿದೆ ಎಂದು ತಿಳಿಸಿದರು.

2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಜಿಲ್ಲೆಗೆ ನಿಗಧಿಪಡಿಸಿದ 75,119 ರೈತರಿಗೆ ರೂ.1017.19 ಕೋಟಿಕೃಷಿ ಸಾಲ ವಿತರಣೆ ಗುರಿ ನಿಗಧಿಪಡಿಸಿದ್ದು, ಮಾರ್ಚ್ 2026 ರ ಅಂತ್ಯಕ್ಕೆ 54,992 ರೈತರಿಗೆ ರೂ. 843.84 ಕೋಟಿ ಕೆಸಿಸಿ ಬೆಳೆ ಸಾಲ ವಿತರಣೆ ಮಾಡಲಾಗಿದೆ. ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, 2026-27 ನೇ ಸಾಲಿಗೆ ರೂ. 1009.00 ಕೋಟಿಗಳ ಕೃಷಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

2025-26ನೇ ಸಾಲಿನಲ್ಲಿ ಶೇ.3ರ ಬಡ್ಡಿ ದರದಲ್ಲಿ 380 ರೈತರಿಗೆ ರೂ. 26.00 ಕೋಟಿ ಕೃಷಿ ಮಾಧ್ಯಮಾವಧಿ ಸಾಲ ವಿತರಣಾ ಗುರಿ ನಿಗಧಿಪಡಿಸಿಕೊಂಡಿದ್ದು, ಮಾರ್ಚ್ 2026ರ ಅಂತ್ಯಕ್ಕೆ 353 ರೈತರಿಗೆ ರೂ. 26 ಕೋಟಿ ಸಾಲ ವಿತರಿಸಲಾಗಿದೆ. 2026-27ನೇ ಸಾಲಿಗೆ 380 ರೈತರಿಗೆ ರೂ. 26 ಕೋಟಿ ಸಾಲ ವಿತರಣೆಗೆ ಗುರಿ ಹೊಂದಲಾಗಿದೆ ಎಂದು ಹೇಳಿದರು.

2025-26ನೇ ಸಾಲಿಗೆ 18,061 ಸಾಲಗಾರ ಸದಸ್ಯರಿಗೆ 569.57 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ. ಇದರೊಂದಿಗೆ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 2026-27ನೇ ಸಾಲಿಗೆ ರೂ. 700 ಕೋಟಿಗಳ ಕೃಷಿಯೇತರ ಸಾಲ ವಿತರಣಾ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿನಲ್ಲಿ ಮಾರ್ಚ್ 26ರ ಅಂತ್ಯದವರೆಗೆ ಒಟ್ಟು 12,355 ಸ್ವಸಹಾಯ ಗುಂಪುಗಳಿದ್ದು, 2025-26ನೇ ಸಾಲಿನಲ್ಲಿ 32 ಹೊಸ ಗುಂಪುಗಳನ್ನು ರಚನೆ ಮಾಡಲಾಗಿದೆ. ಎನ್.ಆರ್.ಎಲ್.ಎಂ ಯೋಜನೆಯಲ್ಲಿ 10 ಸ್ವಸಹಾಯ ಗುಂಪುಗಳಿಗೆ ರೂ. 30 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯ ಬಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದಂತಾಗಿದೆ ಎಂದರು.

ರೈತ ಬಾಂಧವರ ಪ್ರಾಮಾಣಿಕ ಮರು ಪಾವತಿ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ನಿರಂತರ ಶ್ರಮದಿಂದ 2025-26ನೇ ಸಾಲಿಗೆ ಸಾಲ ವಸೂಲಾತಿ ಶೇ.98.05 ರಷ್ಟಾಗಿದ್ದು, ಎನ್‍ಪಿಎ ಪ್ರಮಾಣ ಶೇ. 3.50 ರಷ್ಟಿದೆ. ಆನ ಸುರಕ್ಷಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮ ಯೋಜನೆಗಳಲ್ಲಿ ನೋಂದಣಿಗೆ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಧುನಿಕ ತಂತ್ರಜ್ಞಾನ ಸೇವೆಗಳಾದ ಮೊಬೈಲ್ ಬ್ಯಾಂಕಿಂಗ್, ಯುಪಿಐ, ಐಎಂಪಿಎಸ್ ಹಾಗೂ ಶಾಖೆಗಳಲ್ಲಿ ಮೈಕ್ರೋ ಎಟಿಎಂ ಮತ್ತು ಸೇವೆ ಜಾರಿಗೊಳಿಸಲಾಗಿದೆ. ಇಂಟರ್‍ನೆಟ್ ಬ್ಯಾಂಕಿಂಗ್ ಸೇವೆ ಜಿಲ್ಲೆಯಾದ್ಯಂತ ಒದಗಿಸಲು ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಗ್ರಾಹಕರಿಗೆ ಈ ಸೇವೆ ಲಭಿಸಲಿದೆ. ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಆಧರಿಸಿ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರಸ್ತುತ ಜಿಲ್ಲೆಯಲ್ಲಿ 28 ಶಾಖೆಗಳಿಗಿಂತ ಇನ್ನು ಹೆಚ್ಚಿನ ಶಾಖೆ ತೆರೆಯುವ ಚಿಂತನೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯನ್ನು ಆರಂಭಿಸಲಾಗಿದೆ. ಆರ್‍ಬಿಐ ಅನುಮತಿ ನೀಡಿದರೆ ಜಿಲ್ಲೆಯ ಕಳಸಾಪುರ, ಲಿಂಗದಹಳ್ಳಿ, ಮಲ್ಲಂದೂರು, ಎಂ.ಸಿ.ಹಳ್ಳಿ, ಚೌಳಹಿರಿಯೂರು, ಗವನಹಳ್ಳಿ ಅಥವಾ ಮೂಗ್ತಿಹಳ್ಳಿಯಲ್ಲಿ ನೂತನ ಶಾಖೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

2025-26ನೇ ಸಾಲಿನಲ್ಲಿ ಸದಸ್ಯ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯಗಳಾದ ಸಹಕಾರ ಸಂಘದ ಕಟ್ಟಡ ನಿರ್ಮಾಣ, ಪೀಠೋಪಕರಣ ಖರೀದಿಗಾಗಿ ಆರ್ಥಿಕ ಸೌಲಭ್ಯ ನೀಡಲು ಉದ್ದೇಶಿಸಿ ರೂ. 86 ಲಕ್ಷ ಕಾದಿರಿಸಲಾಗಿದೆ. ಈ ಮೊತ್ತದಿಂದ ಜಿಲ್ಲೆಯ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಲಾಗುವುದು ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2013-14 ಸಾಲಿನಿಂದ ಸತತವಾಗಿ ಲಾಭ ಗಳಿಸುತ್ತಿದ್ದು, 2025-26ನೇ ಸಾಲಿಗೆ 6.87 ಕೋಟಿಗಳ ನಿವ್ವಳ ಲಾಭ ಗಳಿಸಿರುತ್ತದೆ. ಪ್ರಸಕ್ತ ಸಾಲಿಗೂ ಸದಸ್ಯ ಸಹಕಾರ ಸಂಘಗಳಿಗೆ ಡಿವಿಡೆಂಡ್ ನೀಡಲು ಉದ್ದೇಶಿಸಿದ್ದು, ಸಂಘದ ಮಹಾಸಭೆಯಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಕೆ.ಆರ್.ಆನಂದಪ್ಪ, ಸೋನಾಲ್ ಗೌಡ, ಬಸವರಾಜಪ್ಪ, ದಿನೇಶ್ ಹೆಗಡೆ, ಅದ್ದಡ ಸತೀಶ್, ಜಯಪಾಲ್, ರಮೇಶ್, ಹಳಸೆ ಶಿವಣ್ಣ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯ್ಕ್ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *