ಚಿಕ್ಕಮಗಳೂರು ಕರ್ನಾಟಕ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ಆರಂಭವಾಗಲಿದ್ದು, ಯಾರಿಗೂ ಭಯ ಬೇಡ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.
ಅವರು ಇಂದು ಗ್ಯಾರಂಟಿ ಪ್ರಾಧಿಕಾರದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತದ್ದರು.
ಮುಂದುವರೆದು ಮಾತನಾಡಿದ ಅವರು, ಈಗಾಗಲೇ 1877 ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಕೆಲವು ಇಲಾಖಾಧಿಕಾರಿಗಳನ್ನು ಪರಿವೀಕ್ಷಕರನ್ನಾಗಿ ನೇಮಿಸಲಾಗಿದೆ. ಅವರೊಂದಿಗೆ ಜಿಲ್ಲೆಯ 2000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ, ವಾರ್ಡ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಸೇರಿ ಪರಿಷ್ಕರಣೆ ಆರಂಭಿಸಲಿದ್ದಾರೆ. ಪರಿಷ್ಕರಣೆಗೆ ಬರುವ ಮುನ್ನವೇ ಫಲಾನುಭವಿಗಳು ಸಲ್ಲಿಸಬೇಕಾದ ದಾಖಲಾತಿ ಮತ್ತಿತರ ವಿಷಯಗಳನ್ನು ತಿಳಿಸಲಾಗುವುದು. ಜಿಲ್ಲೆಯ 2.62 ಲಕ್ಷ ಯಜಮಾನಿಯರ ಮನೆ ಮನೆಗೆ ತೆರಳಿ ಪರಿಷ್ಕರಣೆ ನಡೆಸಲಾಗುವುದು ಎಂದರು.
ಪರಿಷ್ಕರಣೆಯ ವಿಧಾನಗಳನ್ನು ಸಭೆಗೆ ವಿವರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಅವರು, 32 ಕಂತುಗಳ ಮೂಲಕ ಜಿಲ್ಲೆಗೆ ಈವರೆಗೆ 1627 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಇ-ಕೆವೈಸಿ ಮಾಡಿಸಲು ಅಕ್ಟೋಬರ್ 20 ರವರೆಗೆ ಸಮಯ ನೀಡಲಾಗಿದ್ದು, ಈಗಾಗಲೇ ಇ-ಕೆವೈಸಿ ಯಾರಿಗೆಲ್ಲ ಮಾಡಿಸಬೇಕೆಂಬ ಮಾಹಿತಿಯನ್ನು ಪಡಿತರ ವಿತರಣಾ ಶಾಖೆಗಳ ಮೂಲಕ ತಿಳಿಸಲಾಗಿದ್ದು, ಕೆಲಸ ಮತ್ತು ಶಾಲೆಗಳಿಗೆ ಹೋದವರಿಗೆ ತೊಂದರೆ ಆಗಬಾರದೆಂದು ರಾತ್ರಿ 8 ಗಂಟೆಯವರೆಗೆ ಇ-ಕೆವೈಸಿ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಯೋಗಾನಂದ ಅವರು ಮಾಹಿತಿ ನೀಡಿ, ಈವರೆಗೆ 8.26 ಲಕ್ಷ ಫಲಾನುಭವಿಗಳಿಗೆ 396 ಕೋಟಿ ರೂ. ಗಳ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಪರಿಷ್ಕರಣೆ ಶೇ. 90 ರಷ್ಟು ನಡೆದಿದ್ದು, 3000ಕ್ಕೂ ಹೆಚ್ಚು ಫಲಾನುಭವಿಗಳು ಯೋಜನೆಯನ್ನು ಸ್ವಇಚ್ಚೆಯಿಂದ ಯೋಜನೆಯಿಂದ ಹೊರಗೆ ಉಳಿದಿದ್ದು, 8 ರಿಂದ 10 ಸಾವಿರ ಮನೆಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಒದಗಿಸಲಾಗುತ್ತಿದ್ದು, ಪರಿಷ್ಕರಣೆ ಸಮಯದಲ್ಲಿ ಡೋರ್ಲಾಕ್ ಇತ್ಯಾದಿ ಕಾರಣಗಳಿಗೆ ಪರಿಷ್ಕರಣೆ ಆಗಿಲ್ಲವೋ ಅವರು ಸೆಪ್ಟೆಂಬರ್ 30 ರೊಳಗೆ ಇಲಾಖೆಯ ಸಂಪರ್ಕದೊಂದಿಗೆ ಪರಿಷ್ಕರಣೆ ಮಾಡಿಸಿಕೊಳ್ಳಬೇಕೆಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್‍ಗಳಾದ ಮಂಜುನಾಥ್ ಅವರು ಸಭೆಗೆ ವಿವರಿಸಿದರು. 3.22 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಯೋಜನೆಯಡಿ ಸರ್ಕಾರ 433 ಕೋಟಿ ರೂ.ಗಳನ್ನು ಭರಿಸಿದೆ ಎಂದರು.
ಶಕ್ತಿ ಯೋಜನೆ ಅಧಿಕಾರಿ ಪ್ರದೀಪ್ ರವರು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಈವರೆಗೆ 7.38 ಲಕ್ಷ ಟ್ರಿಪ್‍ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಅದಕ್ಕಾಗಿ ಸರ್ಕಾರ 290 ಕೋಟಿ ರೂ.ಗಳನ್ನು ಭರಿಸಿದೆ ಎಂದರು. ಯುವನಿಧಿ ಯೋಜನೆಯ ಬಗ್ಗೆ ಇಲಾಖಾ ಅಧಿಕಾರಿಗಳಾದ ಖಲಂದರ್ ಅವರು ಸಭೆಗೆ ಮಾಹಿತಿ ನೀಡುತ್ತಾ ಜಿಲ್ಲೆಯ ಸುಮಾರು 2000 ಪದವಿ ಹಾಗೂ ಡಿಪ್ಲೂಮಾ ಪದವೀಧರರಿಗೆ ಈವರೆಗೆ 18 ಕೋಟಿ ರೂ.ಗಳನ್ನು ಸರ್ಕಾರ ನೀಡಿದ್ದು, ಅವರುಗಳಿಗೆ ಮಾಹಿತಿ ಹಾಗೂ ತರಬೇತಿ ನಡೆಸುವ ಕೆಲಸವನ್ನು ಇಲಾಖೆ ಮಾಡುತ್ತಿರುವುದಾಗಿ ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎಸ್.ಕೀರ್ತನಾ ಅವರು ಭಾರತ್ ಜೋಡೋ ಯುವಕ ಸಂಘಗಳ ರಚನೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಗ್ಯಾರಂಟಿ ಸಮಿತಿಗಳ ಸದಸ್ಯರು ಹೆಚ್ಚು ಕಾಳಜಿಯಿಂದ ಮುಂದಾಗಬೇಕು. ಈ ಸಂಘಗಳು ಯುವಕರನ್ನು ಮುಖ್ಯವಾಹಿನಿಗೆ ತರುವಲ್ಲಿ ಅತೀ ಮುಖ್ಯವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಡಾ.ಸಿ.ರಮೇಶ್ ಅವರು ಸಂಘಗಳ ರಚನೆ ಇತ್ಯಾದಿ ವಿಚಾರವನ್ನು ಸಭೆಗೆ ತಿಳಿಸಿದರು.
ಒಟ್ಟಾರೆ ಜಿಲ್ಲೆಗೆ ಕಳೆದ 3 ವರ್ಷಗಳಿಂದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು 10 ಲಕ್ಷ ಫಲಾನುಭವಿಗಳಿಗೆ 2765 ಕೋಟಿ ರೂ.ಗಳು ರಾಜ್ಯ ಸರ್ಕಾರದಿಂದ ಕೊಡ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್ ಅವರು ತಿಳಿಸಿದರು.
ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಮೀವುಲ್ಲಾ, ಮಂಜುನಾಥ, ಕೃಷ್ಣೇಗೌಡ, ಚಂದ್ರಮೌಳಿ, ಹೇಮಾವತಿ ಹಾಗೂ ತಾಲ್ಲೂಕು ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.


