ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಹೆಚ್ಚಳ, ಮಾರುಕಟ್ಟೆ ಏರಿಳಿತ ಸೇ-ರಿದಂತೆ ವಿವಿಧ ಸಮಸ್ಯೆಗಳಿಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಕಾಫಿ ಉದ್ಯಮದ ಮೇಲೆ ಪರಿಣಾಮ ಬೀರುವ ಕಾಯ್ದೆಗಳನ್ನು ವಿರೋಧಿಸಲು ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕಿದೆ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಚಿಕ್ಕಮಗಳೂರು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘ ಹಾಗೂ ಟೆಂಡರ್ ಟುಡೇ ಗ್ರೂಪ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಾಫಿ ಬೆಳೆಗಾರರ ತಾಂತ್ರಿಕ ಸಮಾವೇಶ, ವಿಚಾರ ಸಂಕೀರ್ಣ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇಥಿಯೋಪಿಯಾದಲ್ಲಿ 9ನೇ ಶತಮಾನದಲ್ಲಿ ಆರಂಭವಾದ ಕಾಫಿ, ನಂತರ ವಿಶ್ವದ ವಿವಿಧ ಭಾಗಗಳಿಗೆ ಪಸರಿಸಿ ಭಾರತಕ್ಕೆ ಬಂದಿದ್ದು, ಚಿಕ್ಕಮಗಳೂರಿನ ಚಂದಗೋಡು ಪ್ರದೇಶದಲ್ಲಿ ಬಾಬಾ ಬುಡನ್ ಅವರ ಮೂಲಕ ಕಾಫಿ ಬೆಳೆಯು ಆರಂಭಗೊಂಡು ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿರುವ ಕಾಫಿ ಉದ್ಯಮ ದೇಶದ ಆರ್ಥಿಕತೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಭಾರತ ಇಂದು ವಿಶ್ವದ ಪ್ರಮುಖ ಕಾಫಿ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಬೇಕಾಗಿದೆ. ಕಾಫಿಯ ಗುಣಮಟ್ಟವನ್ನು ಕಾಪಾಡುವುದು, ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡುವುದು ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾಫಿ ಬೆಲೆ ಏರಿಳಿತವಾಗುತ್ತಿದ್ದರೂ ಗೊಬ್ಬರ, ಕಾರ್ಮಿಕರ ಕೂಲಿ ಸೇರಿದಂತೆ ಉತ್ಪಾದನಾ ವೆಚ್ಚದಲ್ಲಿ ಇಳಿಕೆಯಾಗುವುದಿಲ್ಲ. ಹೀಗಾಗಿ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ವಿಶೇಷ ಪ್ಯಾಕೇಜ್ ರೂಪಿಸುವ ಅಗತ್ಯವಿದೆ ಎಂದರು.
ವಿದರ್ಭ ಮಾದರಿಯಲ್ಲಿ ಕಾಫಿ ಬೆಳೆಗಾರರ ಸಾಲಮನ್ನಾ ಅಥವಾ ವಿಶೇಷ ಆರ್ಥಿಕ ನೆರವು ಕಲ್ಪಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು, ಸಂಸದರು ಹಾಗೂ ಕಾಫಿ ಮಂಡಳಿ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಕಾಫಿ ಬೆಳೆಯುವುದರ ಜೊತೆಗೆ ಅದಕ್ಕೆ ಸೂಕ್ತವಾದ ಮಾರುಕಟ್ಟೆ ಕಲ್ಪಿಸುವುದು ಮುಖ್ಯ ಭಾರತೀಯ ಕಾಫಿಯನ್ನು ಜಾಗತಿ ಕ ಮಾರುಕಟ್ಟೆಯಲ್ಲಿ ಪ್ರತ್ಯೇಕ ಬ್ರಾಂಡೆಡ್ ಆಗಿ ಗುರುತಿಸುವ ಕೆಲಸವಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಬೆಳೆ ಮತ್ತು ಬೆಲೆ ನಡುವಿನ ಅಸಮತೋಲನ ಹಾಗೂ ಮೌಲ್ಯವರ್ಧನೆಯ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಿ ಕಂಡುಕೊಳ್ಳಬೇಕು ಎಂದು ಹೇಳಿದರು.
ಕಾರ್ಮಿಕರ ಕೊರತೆಗೆ ತಂತ್ರಜ್ಞಾನ ಬಳಕೆ ಪರಿಣಾಮಕಾರಿ ಪರಿಹಾರವಾಗಬಹುದು. ಕಾಫಿ ಸಂಸ್ಕರಣೆ, ಕೊಯ್ದು, ವಿಂಗಡಣೆ ಸೇ-ರಿದಂತೆ ವಿವಿಧ ಹಂತಗಳಲ್ಲಿ ಯಾಂತ್ರೀಕರಣ-ಕೈ ಒತ್ತು ನೀಡಬೇಕು. ಕಾಫಿಗೆ ಮೌಲ್ಯವರ್ಧನೆ ಮಾಡಿ, ಭಾರತೀಯ ಕಾಫಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ಬ್ರಾಂಡೆಡ್ ರೂಪಿಸಬೇಕು ಎಂದರು.
ಕಾಫಿ ತೋಟಗಳಲ್ಲಿ ಕಾಳುಮೆಣಸಿನ ಜೊತೆಗೆ ಸ್ಥಳೀಯ ಹವಾಮಾನಕ್ಕೆ ಹೊಂದುವ ಪರ್ಯಾಯ ಬೆಳೆಗಳನ್ನು ಬೆಳೆಯುವ ಕುರಿತು ಸಂಶೋಧನೆ ಅಗತ್ಯ. ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸಂಶೋಧನಾ ಸಂಸ್ಥೆಗಳು ಹಾಗೂ ಕಾಫಿ ಮಂಡಳಿ ವೈಜ್ಞಾನಿಕ ಪರಿಹಾರಗಳನ್ನು ಒದಗಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಕಾಫಿ ಬೆಳೆಗಾರರು ಹಳೆಯ ಪದ್ಧತಿಗಳಿಂದ ಆಧುನಿಕ ಕೃಷಿ ತಂತ್ರಜ್ಞಾನಗಳತ್ತ ಸಾಗಬೇಕಾಗಿದೆ. ಕಾರ್ಮಿಕರ ಕೊರತೆ ಹಾಗೂ ಹವಾಮಾನ ವೈಪ-ರೀತ್ಯದಿಂದಾಗಿ ಕಾಫಿ ಕೊಯ್ದು ಮತ್ತು ಒಣ-ಗಿಸುವಿಕೆ ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆ ಎದುರಾಗುತ್ತಿದೆ. ಮಳೆಯ ಸಂದರ್ಭದಲ್ಲಿ ಕಾಫಿ ಒಣಗಿಸಲು ಆಧುನಿಕ ಡೈಯಿಂಗ್ ವ್ಯವಸ್ಥೆ ಸೇ-ರಿದಂತೆ ಯಂತ್ರೋಪಕರಣಗಳನ್ನು ಬಳಸಬೇಕು. ಹಣ್ಣು ಮತ್ತು ಕಾಯಿಯನ್ನು ವಿಂಗಡಿಸುವ
ಯಂತ್ರಗಳು ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ಕಾರ್ಮಿಕರ ಮೂಲಕ ಹೆಚ್ಚಿನ ಉತ್ಪಾದನೆ ಸಾಧಿಸಬಹುದು ಎಂದರು.
ಕಾಫಿ ಬೆಳೆಗಾರರನ್ನು ಕೇವಲ ಶ್ರೀಮಂತ ವರ್ಗವೆಂದು ನೋಡುವುದು ಸರಿಯಲ್ಲ. ಅನೇಕ ಸಣ್ಣ ಹಾಗೂ ಮಧ್ಯಮ ಬೆಳೆಗಾರರು ಕಾಫಿ ಬೆಳೆಯನ್ನೇ ಅವಲಂಬಿಸಿ ಕುಟುಂಬ ನಿರ್ವಹಿಸುತ್ತಿದ್ದಾರೆ. ಕಾಫಿ ಉದ್ಯಮದ ಮೇಲೆ ಪರಿಣಾಮ ಬೀರುವ ಯಾವುದೇ ನೀತಿ ರೂಪಿಸುವಾಗ ಅವರ ಬದುಕನ್ನೂ ಪರಿಗಣಿಸಬೇಕು ಎಂದು ಹೇಳಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಮಂಡಳಿಯನ್ನು ಜನಸ್ನೇಹಿಯಾಗಿ ರೂಪಿಸಲು ಪ್ರಯತ್ನಿಸುತ್ತಿರುವುದು ಆಶಾದಾಯಕವಾಗಿದೆ. ಮಂಡಳಿಯ ಸಿಇಒ ಸೇರಿದಂತೆ ಅಧಿಕಾರಿಗಳು ಹಾಗೂ ಬೆಳೆಗಾರರ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಿದರೆ ಕಾಫಿ ಉದ್ಯಮಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್ ಮಾತನಾಡಿ, ಜಿಲ್ಲೆಯ ಕಾಫಿ ಬೆಳೆಗಾರರನ್ನು ಒಂದೇ ವೇದಿಕೆಯಡಿ ಸಂಘಟಿಸುವ ಉದ್ದೇಶದಿಂದ ಜಿಲ್ಲಾ ಬೆಳೆಗಾರರ ಸಂಘವನ್ನು ಬಲಪಡಿಸಲಾಗುತ್ತಿದೆ. ಉದ್ಯಮದಿಂದ ದೂರ ಸರಿದು ಯುವಕರು ನಗರಗಳತ್ತ ತೆರಳುತ್ತಿರುವುದು ಆತಂಕಕಾರಿ ಬೆಳವಣಿಗೆ ಕಾಫಿ ತೋಟಗಳಲ್ಲಿ ಆಧುನಿಕ ತಂತ್ರಜ್ಞಾನ, ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆ ರೂಪಿಸಿದರೆ ಯುವಕರನ್ನು ಮತ್ತೆ ಕೃಷಿಯತ್ತ ಆಕರ್ಷಿಸಬಹುದು ಎಂದು ಹೇಳೆದರು.
ಕಾರ್ಯಕ್ರಮದಲ್ಲಿ ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಜಿಲ್ಲಾ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ದೇವರಾಜ್, ಸುರೇಂದ್ರ, ಪವಿತ್ರರಶೀಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಪ್ರಮುಖರಾದ ಬಿ.ಬಿ ನಿಂಗಯ್ಯ, ಡಾ. ವಿಜಯಕುಮಾರ್, ಡಾ. ಕೃಷ್ಣಗೌಡ, ಶ್ರೀಹರಿ ಮತ್ತಿತರರಿದ್ದರು.


