ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಬೆಂಗಳೂರಿಗೆ ಮಳೆ ಮುನ್ಸೂಚನೆ ಸಿಕ್ಕಿದ್ದು, ಇಂದು ಸೋಮವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸೆಪ್ಟೆಂಬರ್ 24ರವರೆಗೂ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇಂದು 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಗದಗ್, ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರಲ್ಲೂ ಮುಂದಿನ ನಾಲ್ಕು ದಿನಗಳ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ತೀರದಲ್ಲಿ ಗಾಳಿಯು ಗಂಟೆಗೆ 30-40ಕಿಮೀ ವೇಗದಲ್ಲಿ ಬೀಸಲಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 25ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಮಲೆನಾಡು : ಕೊಡಗು, ಹಾಸನದ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 25ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದರೆ, ಉಳಿದ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರ ತನಕ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸೆಪ್ಟೆಂಬರ್ 24ರ ತನಕ ಉತ್ತಮ ಮಳೆಯ ನಿರೀಕ್ಷೆ ಇದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಸೆಪ್ಟೆಂಬರ್ 22,23ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳವ ಲಕ್ಷಣಗಳಿದ್ದು, ಸೆಪ್ಟೆಂಬರ್ 25ರಂದು ಒಡಿಸ್ಸಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ.
ಈ ಚಂಡಮಾರುತವು ಶಿಥಿಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಮಳೆಯ ಪ್ರಮಾಣವೂ ಕ್ಷೀಣಿಸಲಿದೆ. ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭಗೊಂಡಿದ್ದು, ಸೆಪ್ಟೆಂಬರ್ 25ರ ನಂತರ ಈ ಪ್ರಕ್ರಿಯೆ ಚುರುಕುಗೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದೆ.


