September 25, 2026
;
1004061740

 

 

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ವತಿಯಿಂದ “ಕನ್ನಡ ಮನಸ್ಸುಗಳ ಸಮಾಗಮ” ಕಾರ್ಯಕ್ರಮವನ್ನು ಮೂಡಿಗೆರೆ ಸಮೀಪದ ಶ್ರೀಮತಿ ನಿರ್ಮಲ ಮಂಚೇಗೌಡ ಅವರ ನಿವಾಸ ಚಂದನ್ ಪ್ಲಾಂಟೇಷನ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸೂರಿ ಶ್ರೀನಿವಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷರಾದ ನಿರ್ಮಲಾ ಮಂಚೇಗೌಡ, ತಾಲ್ಲೂಕು ಅಧ್ಯಕ್ಷೆ ರೇಖಾರವಿರಾಜ್, ಇತ್ತೀಚೆಗೆ ನಡೆದ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ  ಭಾಗ್ಯ ಲಕ್ಷ್ಮಣ ಗೌಡ, ಕ.ಸಾ.ಪ ತಾಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ಸಾಹಿತಿ ಎಸ್.ಎಸ್.ವೆಂಕಟೇಶ್, ಸೇರಿದಂತೆ ಜಿಲ್ಲೆ, ತಾಲ್ಲೂಕು, ಹೋಬಳಿ ಅಧ್ಯಕ್ಷರು, ಪದಾಧಿಕಾರಿಗಳು ಪರಿಷತ್ ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ನಿರ್ಮಲಾ ಮಂಚೇಗೌಡ ಹಾಗೂ ಸಮ್ಮೇಳನಾಧ್ಯಕ್ಷರಾದ ಭಾಗ್ಯ ಲಕ್ಷ್ಮಣ ಗೌಡ ಅವರ ಕೊಡುಗೆಯನ್ನು ಸ್ಮರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಆರಂಭದಲ್ಲಿ ಎದುರಾದ ಆತಂಕ ಹಾಗೂ ಅಪಸ್ವರಗಳನ್ನು ಮೆಟ್ಟಿ ನಿಂತು ಕನ್ನಡ ಕಟ್ಟುವ ಕಾರ್ಯಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಬೇಕು ಎಂದು ಶುಭ ಹಾರೈಸಿದರು.

ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ ಗೌಡ ಮಾತನಾಡಿ, ಮಹಿಳೆಯರು ತಮ್ಮ ಮನಸ್ಸಿನ ವಿಚಾರಗಳು, ಅನುಭವಗಳು ಮತ್ತು ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇಂತಹ ವೇದಿಕೆಗಳು ಅಗತ್ಯವಿದೆ ಎಂದರು. ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ನಡೆದ ಚರ್ಚೆಗಳು ಹಾಗೂ ಹಂಚಿಕೊಂಡ ವಿಚಾರಗಳು ಎಲ್ಲರಿಗೂ ಸಂತಸ ಮತ್ತು ಹೊಸ ಚಿಂತನೆಗಳನ್ನು ನೀಡಿವೆ ಎಂದು ಹೇಳಿದರು. ಸಂಸಾರದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ತಾಳ್ಮೆ ಬಹಳ ಮುಖ್ಯವಾಗಿದ್ದು, ಕುಟುಂಬ ಹಾಗೂ ಸಂಸ್ಥೆಯ ಎಲ್ಲರ ಸಹಕಾರದಿಂದ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಮಂಚೇಗೌಡ ಮಾತನಾಡಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಮ್ಮೇಳನಾಧ್ಯಕ್ಷರಾಗಿ ಭಾಗ್ಯ ಲಕ್ಷ್ಮಣ ಗೌಡ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಸಮ್ಮೇಳನದ ಆಯೋಜನೆಯಲ್ಲಿ ಅಶ್ವಿನಿ, ರೇಖಾ ರವಿರಾಜ್, ಪ್ರೇಮಕ್ಕ ಹಾಗೂ ಕಲಾವತಿ ರಾಜಣ್ಣ ಸೇರಿದಂತೆ ಹಲವರು ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಾರೆ ಎಂದು ಸ್ಮರಿಸಿದರು.

ಮಹಿಳೆಯರು ಮದುವೆಯ ನಂತರ ಹೊಸ ಕುಟುಂಬ ಹಾಗೂ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ಮತ್ತು ಅವಕಾಶ ನೀಡಬೇಕು ಎಂಬ ವಿಚಾರವನ್ನು ಪ್ರಸ್ತಾಪಿಸಿದ ನಿರ್ಮಲಾ ಮಂಚೇಗೌಡ, “ಹೆಣ್ಣುಮಕ್ಕಳು ನೀರಿನಂತೆ—ಯಾವ ಪಾತ್ರೆಗೆ ಹಾಕಿದರೂ ಅದರ ಆಕಾರ ಪಡೆಯುತ್ತಾರೆ; ಆದರೆ ಅವರಿಗೆ ಸ್ವಲ್ಪ ಸಮಯ ಮತ್ತು ಅವಕಾಶ ನೀಡಬೇಕು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಮಹಿಳಾ ಚಿಂತನೆ, ಕುಟುಂಬ ಮೌಲ್ಯಗಳು ಹಾಗೂ ಸಾಮಾಜಿಕ ವಿಚಾರಗಳ ಕುರಿತು ಅರ್ಥಪೂರ್ಣ ಚರ್ಚೆಗಳು, ಸಂಗೀತ ಕಾರ್ಯಕ್ರಮ ನಡೆದವು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರು ಮತ್ತು ಸಾಹಿತ್ಯಾಸಕ್ತರ ಉಪಸ್ಥಿತಿಯಿಂದ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.

 

 

Leave a Reply

Your email address will not be published. Required fields are marked *