ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣಾ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಆಲ್ದೂರು ಗ್ರಾಮ ಸಮಿತಿಯ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣಾ ಟ್ಯಾಕ್ಟರ್ ಸಂಚರಿಸುತ್ತಿದ್ದರೂ ಹಲವು ಪ್ರದೇಶಗಳಲ್ಲಿ ಮನೆಗಳಿಂದ ನೀಡುವ ಕಸವನ್ನು ಸಮರ್ಪಕವಾಗಿ ಸಂಗ್ರಹಿಸದೆ ವಾಹನ ತೆರಳುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕಸ ಸಂಗ್ರಹಣಾ ವಾಹನದಲ್ಲಿ ಧ್ವನಿವರ್ಧಕ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಯಾವ ಸಮಯದಲ್ಲಿ ಹಾಗೂ ಯಾವ ಪ್ರದೇಶಕ್ಕೆ ಬರುತ್ತದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಸರಿಯಾಗಿ ದೊರೆಯುತ್ತಿಲ್ಲ ಎಂದು SDPI ಮುಖಂಡರು ಗಮನಕ್ಕೆ ತಂದರು.
ಪ್ರತಿಯೊಂದು ವಾರ್ಡ್‌ನಲ್ಲೂ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವುದು, ಯಾವುದೇ ಮನೆಯ ಕಸವನ್ನು ಬಿಟ್ಟು ಹೋಗದಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದು, ವಾಹನಕ್ಕೆ ಧ್ವನಿವರ್ಧಕ ಅಳವಡಿಸುವುದು ಹಾಗೂ ಕಸ ಸಂಗ್ರಹಣೆಯ ಸಮಯ ಮತ್ತು ಮಾರ್ಗವನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಯ ಹಿತದೃಷ್ಟಿಯಿಂದ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. ಸಮಸ್ಯೆ ಮುಂದುವರಿದಲ್ಲಿ SDPI ವತಿಯಿಂದ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ SDPI ಆಲ್ದೂರು ಗ್ರಾಮ ಸಮಿತಿ ಅಧ್ಯಕ್ಷ ಇಮ್ರಾನ್ ಅನ್ಸರ್, ಕಾರ್ಯದರ್ಶಿ ರಿಯಾಜ್, ಮೂಡಿಗೆರೆ ವಿಧಾನಸಭಾ ಕ್ಷೇತ್ರ ಸಹ ಕಾರ್ಯದರ್ಶಿ ಮನ್ಸೂರ್ ಹಾಗೂ ಗ್ರಾಮ ಸಮಿತಿ ಕೋಶಾಧಿಕಾರಿ ಜಿಶಾನ್ ಉಪಸ್ಥಿತರಿದ್ದರು.


