October 7, 2026
;
1004101605

 

 

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದ ಮಡ್ಡೀಕೆರೆ ಗೋಪಾಲ್ ಅವರು ಮೈಸೂರು ಜಿಲ್ಲೆಯ ಸಾಂಸ್ಕೃತಿಕ ವಲಯದಲ್ಲಿ ಅಜಾತಶತ್ರುವಾಗಿ ಗೌರವಕ್ಕೆ ಪಾತ್ರರಾಗಿದ್ದರು ಎಂದು ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹೇಳಿದರು.

ಅವರು ಶನಿವಾರ ಮೂಡಿಗೆರೆ ತಾಲ್ಲೂಕಿನ ಮಡ್ಡೀಕೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಡ್ಡೀಕೆರೆ ಗೋಪಾಲ್ ವೃತ್ತ ಅನಾವರಣದ ನಂತರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.

ಗೋಪಾಲ್ ಅವರು ಮಲೆನಾಡಿನ ಮಡ್ಡೀಕೆರೆಯಿಂದ ಮೈಸೂರಿಗೆ ಬಂದು ಅಲ್ಲಿ ತನ್ನ ನಾಯಕತ್ವ ಗುಣದಿಂದ, ವಿಶಾಲ ಮನೋಭಾವನೆಯಿಂದ ಕನ್ನಡ ನಾಡು ನುಡಿಗೆ ಅಪಾರವಾದ ಕೊಡುಗೆ ನೀಡಿದ್ದರು. ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರು ಹೊಸ ಹುರುಪು ನೀಡಿದ್ದರು. ಅವರಿಗೆ ಯಾವುದೇ ರಾಜಕೀಯ ಅಧಿಕಾರ ಇಲ್ಲದೆಯೂ ಅಪಾರವಾದ ಜನಸೇವೆ ಮಾಡಿದ್ದರು. ಕಷ್ಟ ಎಂದು ತಮ್ಮ ಬಳಿ ಬಂದವರಿಗೆ ಸಹೃದಯತೆಯಿಂದ ಸ್ಪಂದಿಸಿ ನೆರವಾಗುತ್ತಿದ್ದರು. ಉತ್ತಮ ಸ್ನೇಹಜೀವಿಯಾಗಿದ್ದರು. ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಅವರ ನೆನಪಿನಲ್ಲಿ ಮೈಸೂರಿನ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರಿಡಲು ಮಹಾನಗರ ಪಾಲಿಕಿಗೆ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಶ್ರೀಮತಿ ಮೋಟಮ್ಮ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಂದೂರು ಅಶೋಕ್, ಸಾಹಿತಿಗಳಾದ ಮೇಕನಗದ್ದೆ ಲಕ್ಷ್ಮಣಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ,  ರಾಧಾ ಸುಂದರೇಶ್, ಬಿ.ಕೆ. ಲಕ್ಷ್ಮಣಕುಮಾರ್, ಪ್ರಸನ್ನ ಗೌಡಹಳ್ಳಿ, ಮರಬೈಲ್ ಚಂದ್ರೇಗೌಡ, ಎಂ.ಆರ್. ಚಂದ್ರೇಗೌಡ, ದೊಡ್ಡಮನಿ ಆನಂದ, ಮೈಸೂರಿನಿಂದ ಆಗಮಿಸಿದ್ದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಡಾ. ಜಯಪ್ಪ ಹೊನ್ನಾಳಿ, ಡೈರಿ ವೆಂಕಟೇಶ್, ಮೈನಾ ಲೋಕೇಶ‍್, ಮಡ್ಡೀಕೆರೆ ಗೋಪಾಲಯ್ಯ,  ಮುಕುಂದ  ಮುಂತಾದವರು ನುಡಿನಮನ ಸಲ್ಲಿಸಿದರು.

ಕವಯಿತ್ರಿ ರಶ್ಮಿ ರಜಿತ್ ಕವನ ವಾಚನ ಮೂಲಕ ಕಾವ್ಯ ನಮನ ಸಲ್ಲಿಸಿದರು. ಸುಚಿತ್ರ ಪ್ರಸನ್ನ ಪ್ರಾರ್ಥನೆ ಮಾಡಿದರು. ಎಂ.ಎಸ್. ನಾಗೇಶ್ ವಂದಿಸಿದರು.

ಮಡ್ಡೀಕೆರೆ ಗೋಪಾಲ್ ಅವರ ನೆನಪಿನಾರ್ಥ ಅವರು ಮಡ್ಡೀಕೆರೆ ಗ್ರಾಮಕ್ಕೆ ಹೆಸರು ತಂದಿದ್ದನ್ನು ಸ್ಮರಿಸಿ ಮೂಡಿಗೆರೆ ತಾಲ್ಲೂಕಿನ ಮಡ್ಡೀಕೆರೆ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ತೆರಳುವ ರಸ್ತೆಯ ವೃತ್ತಕ್ಕೆ ಮಡ್ಡೀಕೆರೆ ಗೋಪಾಲ್ ವೃತ್ತ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣ ಮಾಡಲಾಯಿತು.  ನಂತರ ಮಡ್ಡೀಕೆರೆ ಗ್ರಾಮದಲ್ಲಿ ಗೋಪಾಲ್ ಅವರ ಸಹೋದರ ಎಂ.ಎಸ್. ನಾಗೇಶ್ ಅವರ ಮನೆಯ ಆವರಣದಲ್ಲಿ ಗೋಪಾಲ್ ಅವರ ತಿಂಗಳ ಆರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಡ್ಡೀಕೆರೆ ಗ್ರಾಮಸ್ಥರು, ಗೋಪಾಲ್ ಅವರ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ನಮನ ಸಲ್ಲಿಸಿದರು.

 

 

Leave a Reply

Your email address will not be published. Required fields are marked *