October 7, 2026
;
balu balur

 

 

ಚಿಕ್ಕಮಗಳೂರು ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆ ಗಳನ್ನು ಪರಿಹರಿಸಲು ಹಾಗೂ ಸಮಗ್ರ ಪ್ರವಾಸೋದ್ಯಮದ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸಲು ಸಚಿವರಾದ  ಕೆ ಜೆ ಜಾರ್ಜ್ ರವರಿಗೆ ಹಾಗೂ ವಿಧಾನಸಭಾ ಸದಸ್ಯರಾದ ಶ್ರೀಮತಿ ನಯನ ಮೋಟಮ್ಮ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಗಾಯತ್ರಿ ಶಾಂತೇಗೌಡರಿಗೆ   ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಬಾಳೂರು ಹಾಗೂ ಪ್ರಧಾನಕಾರ್ಯದರ್ಶಿ ಕೆ ಡಿ ಮನೋಹರ್ ಮನವಿ ಸಲ್ಲಿಸಿದರು.

ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಶನಿವಾರ ನಡೆದ ಜನಸೇವಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆ / ಮೂಡಿಗೆರೆ ತಾಲ್ಲೂಕು ಪ್ರವಾಸೋದ್ಯಮ ಅಭಿವೃದ್ದಿಗಾಗಿ ಹೆಚ್ಚಿನ ಒತ್ತು ನೀಡುವಂತೆ ಮನವಿಯಲ್ಲಿ ಕೋರಲಾಗಿದ್ದು, ಈಗಾಗಲೇ ವಿಶ್ವ ಪ್ರವಾಸೋಧ್ಯಮ ಭೂಪಟದಲ್ಲಿ ಚಿಕ್ಕಮಗಳೂರು ಜಿಲ್ಲೆ ಗುರುತಿಸಿಕೊಂಡಿದೆ. ಆದಾಗ್ಯೂ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ.  ಶಿವಮೊಗ್ಗದಲ್ಲಿ ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣ ಆಗಿದೆ. ಹಾಸನ, ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ನೂತನ ರೈಲು ಮಾರ್ಗದ ಕಾರ್ಯ ಪ್ರಗತಿಯಲ್ಲಿದೆ.  ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರಕ್ಕೆ ರೈಲು ನಿಲ್ದಾಣ ನಿರ್ಮಾಣವಾಗಿ ಸುಸರ್ಜಿತವಾಗಿ ಸಂಪರ್ಕ ಹೊಂದಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಖಂಡಿತಾ ಹೆಚ್ಚಾಗುತ್ತಿದೆ. ಜೊತೆಗೆ ಸ್ಥಳೀಯವಾಗಿ ಆಕರ್ಷಕ ಪ್ರವಾಸೋಧ್ಯಮವನ್ನು ಅಭಿವೃದ್ದಿ ಪಡಿಸಿದರೆ ಜಿಲ್ಲೆಯ ಆರ್ಥಿಕತೆಗೆ ಮತ್ತು ಸ್ಥಳೀಯ ಉದ್ಯೋಗಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

ಉದಾಹಾರಣೆಗೆ ರಾಣಿ ಜರಿ, ಪ್ರದೇಶಕ್ಕೆ ರೋಪ್ ವೇ ನಿರ್ಮಾಣ, ಎತ್ತಿನಭುಜ, ದೇವರಮನೆ, ಕ್ಯಾತನಮಕ್ಕಿ ಮತ್ತು ಹೇಮಾವತಿ ಉಗಮ ಸ್ಥಾನ, ಮುಂತಾದ ರಮಣೀಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಗೈಡ್‌ ಗಳನ್ನು ಒದಗಿಸಿಕೊಟ್ಟರೆ ಹಾಗೂ ಟ್ರಕ್ಕಿಂಗ್ ಆಸಕ್ತರಿಗೆ ಅನುಭವಿ ಗೈಡ್‌ಗಳನ್ನು ನೇಮಕಗೊಳಿಸಿದರೆ ಪ್ರವಾಸೋಧ್ಯಮ ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ ಅಭಿವೃದ್ಧಿಯಾಗುತ್ತದೆ. ಇದಲ್ಲದೇ ಧಾರ್ಮಿಕ ಶ್ರದ್ದಾ ಕೇಂದ್ರಗಳಾದ ಶೃಂಗೇರಿ ಹಾಗೂ ಬಾಳೆಹೊನ್ನೂರು, ದತ್ತಪೀಠ, ಮುಳ್ಳಯ್ಯನಗಿರಿ, ಕಳಸಾ, ಕ್ಷೇತ್ರಗಳಿಗೂ ಕೂಡಾ ಆಸಕ್ತ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನದಲ್ಲಿ ಒಂದು ದಿನದ ಕಿರು ಪ್ರವಾಸವನ್ನು ಏರ್ಪಡಿಸುವ ವಿಫುಲ ಅವಕಾಶಗಳಿವೆ.

ಜಿಲ್ಲೆಯ ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿ ಪ್ರವಾಸೋಧ್ಯಮಕ್ಕೆ ಸಂಬಂಧಿಸಿದಂತೆ ಹೆಲ್ಸ್ ಡೆಸ್ಕ್(Help Desk) ಗಳನ್ನು ಸ್ಥಾಪಿಸಿ ಅವುಗಳಿಗೆ ಪ್ರತ್ಯೇಕ App ಗಳ ಮೂಲಕ ಸಂಪರ್ಕ ಕಲ್ಪಿಸಿದರೆ ಪ್ರವಾಸಿಗರಿಗೆ ಉತ್ತಮ ಸೌಕರ್ಯ ನೀಡಿದಂತಾಗುತ್ತದೆ. ಪ್ರವಾಸೋಧ್ಯಮದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಜನಪರ ಸಂಘಟನೆಗಳ ಸಹಕಾರ ಪಡೆದುಕೊಂಡರೆ ಅದರಿಂದ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ದೊರಕಿದಂತಾಗುತ್ತದೆ. ಇದರಿಂದ ಸ್ಥಳೀಯ ಯುವಕರುಗಳಿಗೆ ಉದ್ಯೋಗಾವಕಾಶ ನೀಡಿದಂತಾಗುತ್ತದೆ. ಜೊತೆಗೆ ಹಲವಾರು ರಸ್ತೆಗಳ ಅಭಿವೃದ್ಧಿ ಆಗಬೇಕಾಗಿದೆ.

ಈ ಎಲ್ಲಾ ಅಂಶಗಳನ್ನು ತಾವು ಆದಷ್ಟು ಶೀಘ್ರವಾಗಿ ಪರಿಗಣಿಸಿ ಚಿಕ್ಕಮಗಳೂರು ಜಿಲ್ಲೆ / ಮೂಡಿಗೆರೆ ತಾಲ್ಲೂಕು ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿ  ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.

 

 

Leave a Reply

Your email address will not be published. Required fields are marked *