October 7, 2026
;
IMG_20261005_113916

 

 

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಅರೆಕೊಡಿಗೆ ಗ್ರಾಮದಲ್ಲಿ ಪ್ಲಾಸ್ಟಿಕ್ ಮೆಸ್ (ಬಲೆ) ನಲ್ಲಿ ಸಿಕ್ಕಿಹಾಕಿಕೊಂಡು ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಬೃಹತ್  ಗಾತ್ರದ ನಾಗರ ಹಾವೊಂದನ್ನು ಉರಗ ತಜ್ಞ ಆರೀಫ್ ಬಣಕಲ್ ಯಶಸ್ವಿಯಾಗಿ ರಕ್ಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

​ಅರೆಕೊಡಿಗೆ ಗ್ರಾಮದ ನಿತಿನ್ ಎಂಬುವವರ ಕಾಫಿ ನರ್ಸರಿಯಲ್ಲಿ ಅಳವಡಿಸಲಾಗಿದ್ದ ಮೆಸ್‌ನಲ್ಲಿ ನಾಗರಹಾವು ಆಕಸ್ಮಿಕವಾಗಿ ಸಿಲುಕಿಕೊಂಡಿತ್ತು. ಹೊರಬರಲಾರದೆ ತೀವ್ರವಾಗಿ ಒದ್ದಾಡುತ್ತಿದ್ದ ಹಾವನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಉರಗ ತಜ್ಞ ಆರೀಫ್ ಅವರಿಗೆ ಮಾಹಿತಿ ನೀಡಿದರು.

​ಸ್ಥಳಕ್ಕೆ ಧಾವಿಸಿದ ಆರೀಫ್, ಅತ್ಯಂತ ಜಾಗರೂಕತೆಯಿಂದ ಬಲೆಯನ್ನು ಕತ್ತರಿಸಿ ನಾಗರಹಾವಿಗೆ ಯಾವುದೇ ಗಾಯವಾಗದಂತೆ ಸುರಕ್ಷಿತವಾಗಿ ಹೊರತೆಗೆದರು. ಪ್ರಾಣಾಪಾಯದಿಂದ ಪಾರಾದ ನಾಗರಹಾವನ್ನು ನಂತರ ಚಾರ್ಮಾಡಿ ಘಾಟ್‌ನ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

​ಈ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ಥಳೀಯರಾದ ಸಚಿನ್, ಸಾಗರ್, ಪ್ರಶಾಂತ್ ಹಾಗೂ ವಿನಯ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಉರಗ ತಜ್ಞರ ಸಮಯಪ್ರಜ್ಞೆ ಮತ್ತು ಸಮಯೋಚಿತ ಸಹಾಯವನ್ನು ಶ್ಲಾಘಿಸಿದರು.

 

 

Leave a Reply

Your email address will not be published. Required fields are marked *