October 13, 2026
;
Karnataka Governor - 1

 

 

ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿ ಹಿರಿಯ ನಾಯಕಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯೆ ಡಾ. ಸುಧಾ ಯಾದವ್‌ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ  ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬದಲಾವಣೆಯಲ್ಲಿ ನಾಲ್ವರಿಗೆ ಹೊಸದಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದ್ದು, ಇಬ್ಬರು ಹಾಲಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ.

ಇನ್ನು ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್‌ ಮಾಥುರ್‌ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್‌ ಅರ್ಲೇಕರ್‌ ಅವರಿಗೆ ತಮಿಳುನಾಡಿನ ಜವಾಬ್ದಾರಿ ನೀಡಲಾಗಿದೆ.

ಇದೇ ವೇಳೆ, ಒಡಿಶಾದ ನೂತನ ರಾಜ್ಯಪಾಲರಾಗಿ ಬ್ರಜ್‌ ಮೋಹನ್‌ ರಾಮ್‌, ಉತ್ತರಾಖಂಡದ ರಾಜ್ಯಪಾಲರಾಗಿ ಡಾ. ಧಾಲ್‌ ಸಿಂಗ್‌ ಬಿಸೆನ್‌ ಹಾಗೂ ಸಿಕ್ಕಿಂನ ರಾಜ್ಯಪಾಲರಾಗಿ ದುಷ್ಯಂತ್‌ ಗೌತಮ್‌ ಅವರನ್ನು ನೇಮಕ ಮಾಡಲಾಗಿದೆ.

ಈ ನೇಮಕಾತಿಗಳು ಸಂಬಂಧಪಟ್ಟ ರಾಜ್ಯಗಳಲ್ಲಿ ನೂತನ ರಾಜ್ಯಪಾಲರು ಅಧಿಕಾರ ವಹಿಸಿಕೊಳ್ಳುವ ದಿನದಿಂದ ಜಾರಿಗೆ ಬರಲಿವೆ.

ಯಾರಿವರು ಸುಧಾ ಯಾದವ್ ?

ಹರಿಯಾಣದ ರೇವಾರಿ ಜಿಲ್ಲೆಯ ಮೊಟ್ಲಾ ಕಲನ್ ಗ್ರಾಮದಲ್ಲಿ 1965ರ ಅಕ್ಟೋಬರ್ 16ರಂದು ಸುಧಾ ಯಾದವ್ ಜನಿಸಿದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಅವರು, ಐಐಟಿ ರೂರ್ಕಿಯಲ್ಲಿ  ಎಂಎಸ್ಸಿ ಪದವಿ ಪಡೆದರು. ಬಳಿಕ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ (PhD) ಗಳಿಸಿದರು.   ನಂತರ ಸಾರ್ವಜನಿಕ ಜೀವನ ಮತ್ತು ರಾಜಕೀಯದಲ್ಲಿ ಸಕ್ರಿಯರಾದರು.

1999ರ ಕಾರ್ಗಿಲ್ ಯುದ್ಧ. ಗಡಿ ಭದ್ರತಾ ಪಡೆ (BSF)ಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರ ಪತಿ ಸುಖಬೀರ್ ಸಿಂಗ್ ಯಾದವ್ ಅವರು ಯುದ್ಧದಲ್ಲಿ ಹುತಾತ್ಮರಾದರು.

ಪತಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ನಂತರ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡರು.

ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

2022ರ ಆಗಸ್ಟ್‌ನಲ್ಲಿ ಪಕ್ಷದ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಗೆ ಅವರನ್ನು ಸೇರಿಸಲಾಯಿತು.

ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಅವರು 1999ರಿಂದ 2002ರವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇದೀಗ ಸುಧಾ ಯಾದವ್ ಅವರು ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲೆಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

 

 

Leave a Reply

Your email address will not be published. Required fields are marked *