ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬೆಸೆಯುವ ಪ್ರಮುಖ ಸಂಪರ್ಕ ಕೊಂಡಿಯಾದ ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಿಸರ್ಗ ಪ್ರಿಯರು ಮತ್ತು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಸುಸ್ಥಿತಿಯಲ್ಲಿದ್ದ, ಸದೃಢ ರಸ್ತೆ ಬದಿಯ ತಡೆಗೋಡೆಗಳನ್ನು ಏಕಾಏಕಿ ತೆರವುಗೊಳಿಸಿ ಮರು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಕೆಡವಲಾದ ಕಾಂಕ್ರೀಟ್ ಹಾಗೂ ಕಲ್ಲುಗಳ ಅವಶೇಷಗಳನ್ನು ಕಾರ್ಮಿಕರು ನೇರವಾಗಿ ಘಾಟಿಯ ಆಳವಾದ ಪ್ರಪಾತದ ಅಂಚಿಗೆ ಸುರಿಯುತ್ತಿದ್ದಾರೆ. ರಕ್ಷಣಾತ್ಮಕ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿರುವ ಈ ಕೃತ್ಯದಿಂದಾಗಿ ಕಣಿವೆಯ ಅಂಚಿನಲ್ಲಿರುವ ಸೂಕ್ಷ್ಮ ಸಸ್ಯವರ್ಗ ಹಾಗೂ ಜೀವಸಂಕುಲದ ನೈಸರ್ಗಿಕ ಆವಾಸಸ್ಥಾನಕ್ಕೆ ಭಾರಿ ಹಾನಿ ಉಂಟಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಂಜಯ್ ಗೌಡ ಕೊಟ್ಟಿಗೆಹಾರ ಆಗ್ರಹಿಸಿದ್ದಾರೆ.
ಚಾರ್ಮಾಡಿ ಘಾಟಿಯ ಸಮಗ್ರ ಉನ್ನತೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಮಹತ್ವದ ಯೋಜನೆಯೊಂದು ಕಾರ್ಯರೂಪಕ್ಕೆ ಬರಲು ಸಜ್ಜಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಗ್ರಾಮದಿಂದ ಹಿಡಿದು ಚಿಕ್ಕಮಗಳೂರು ಜಿಲ್ಲೆಯ ಗಡಿಯವರೆಗಿನ ಸುಮಾರು 11.2 ಕಿಲೋಮೀಟರ್ ಉದ್ದದ ರಸ್ತೆಯನ್ನು ಪೂರ್ಣಪ್ರಮಾಣದ ದ್ವಿಪಥ (ಟೂ-ಲೇನ್) ರಸ್ತೆಯನ್ನಾಗಿ ಅಗಲೀಕರಣಗೊಳಿಸಲು ಯೋಜಿಸಲಾಗಿದೆ. ಪ್ರಸ್ತುತ ಕೇವಲ 5 ಮೀಟರ್ ಅಗಲವಿರುವ ಈ ಕಡಿದಾದ ಘಾಟಿ ಮಾರ್ಗವನ್ನು ಬರೋಬ್ಬರಿ 10 ಮೀಟರ್‌ಗೆ ವಿಸ್ತರಿಸಲಾಗುತ್ತಿದ್ದು, ದಕ್ಷಿಣ ಕನ್ನಡ ವ್ಯಾಪ್ತಿಗೆ ಬರುವ 11 ಅಪಾಯಕಾರಿ ಹೇರ್‌ಪಿನ್ ತಿರುವುಗಳ ಅಭಿವೃದ್ಧಿಯೂ ಈ ಯೋಜನೆಯಲ್ಲಿ ಒಳಗೊಂಡಿದೆ.
ಈ ಯೋಜನೆಯ ಪ್ರಾಥಮಿಕ ಸರ್ವೆ ಕಾರ್ಯವನ್ನು ಖಾಸಗಿ ಸಮಾಲೋಚಕ ಸಂಸ್ಥೆಯು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪರಿಷ್ಕೃತ ನೂತನ ಅಲೈನ್‌ಮೆಂಟ್ ವರದಿಯನ್ನು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಹಾಲಿ ಕಾಮಗಾರಿಗಳು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಕಂಟಕ ತರುತ್ತಿದ್ದು, ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಪ್ರಕೃತಿಗೆ ಹಾನಿಯಾಗದಂತೆ ವೈಜ್ಞಾನಿಕವಾಗಿ ಕಾಮಗಾರಿ ಮುನ್ನಡೆಸಬೇಕೆಂಬ ಆಗ್ರಹ ಸ್ಥಳೀಯರಿಂದ ಬಲವಾಗಿ ಕೇಳಿಬರುತ್ತಿದೆ.
ಚಾರ್ಮಾಡಿ ಘಾಟಿಯಲ್ಲಿ ನೂತನ ರಸ್ತೆ ನಿರ್ಮಾಣದ ಹೆಸರಿನಲ್ಲಿ ದೃಢವಾಗಿರುವ ತಡೆಗೋಡೆಗಳನ್ನು (ಸೈಡ್ ವಾಲ್) ಅನಗತ್ಯವಾಗಿ ಒಡೆದು ಹಾಕಲಾಗುತ್ತಿದೆ. ಇದರಿಂದಾಗಿ ಕೆಳಗಿನ ಪರಿಸರ ಸೂಕ್ಷ್ಮ ವಲಯದ ಶೋಲಾ ಅರಣ್ಯಕ್ಕೆ ಕಲ್ಲು-ಮಣ್ಣು ಬಿದ್ದು ನೂರಾರು ಮರಗಳು, ಸಸ್ಯಗಳು ಮತ್ತು ವನ್ಯಜೀವಿಗಳ ಆವಾಸಸ್ಥಾನ ನಾಶವಾಗುತ್ತಿದೆ. ರಸ್ತೆ ಮತ್ತು ಗೋಡೆ ನಿರ್ಮಾಣದ ಹೆಸರಿನಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಕಾಮಗಾರಿಯನ್ನು ತಕ್ಷಣವೇ ತಡೆಹಿಡಿದು ಸೂಕ್ತ ತನಿಖೆ ನಡೆಸಬೇಕು ಎಂದು ಸಂಜಯ್ ಗೌಡ ಆಗ್ರಹಿಸಿದ್ದಾರೆ.


