ಮೂಡಿಗೆರೆ ಜೇಸಿಐ ಸಂಸ್ಥೆ ಮಾಜಿ ಅಧ್ಯಕ್ಷ ಜೇಸಿ ಸುಪ್ರೀತ್ ಕಾರಬೈಲ್ ಅವರಿಗೆ 2026ನೇ ಸಾಲಿನ ಜೇಸಿಐ ವಲಯ ಮಟ್ಟದ ಕಮಲಪತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಕ್ಟೋಬರ್ 4 ರಂದು ಹಾಸನದಲ್ಲಿ ನಡೆದ ಜೇಸಿಐ ವಲಯ 14 ರ ವಲಯ ಸಮ್ಮೇಳನದ ಸಂದರ್ಭದಲ್ಲಿ ಸುಪ್ರೀತ್ ಅವರಿಗೆ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ ವಿತರಿಸಲಾಯಿತು.
ಜೇಸಿಐ ಮೂಲಕ ಸಮಾಜ ಸೇವೆ ಹಾಗೂ ಸ್ವಂತ ಉದ್ದಿಮೆಯಲ್ಲಿ ಸಾಧನೆ ಇವುಗಳನ್ನು ಗುರುತಿಸಿ ಪ್ರತಿ ವರ್ಷ ವಲಯ ಮಟ್ಟದಲ್ಲಿ ಓರ್ವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕಮಲ ಪತ್ರ ಪ್ರಶಸ್ತಿಗೆ ಭಾಜನರಾದ ಸುಪ್ರೀತ್ ಅವರು ಮೂಡಿಗೆರೆ ತಾಲ್ಲೂಕು ಕಾರಬೈಲ್ ಗ್ರಾಮದ ಕೃಷಿಕ ಕುಟುಂಬದ ಕೆ.ಪಿ. ಸೋಮೇಗೌಡ ಶ್ರೀಮತಿ ಲಲಿತಾ ಅವರ ಪುತ್ರರಾಗಿ 1986 ಸೆಪ್ಟೆಂಬರ್ 26 ರಂದು ಜನಿಸಿದ್ದು, ಪದವಿ ವ್ಯಾಸಾಂಗ ಮಾಡಿರುತ್ತಾರೆ.
ವ್ಯಾಸಾಂಗದ ನಂತರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಪ್ರಸ್ತುತ ಕಾಫಿ ಲ್ಯಾಂಡ್ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಹುಟ್ಟುಹಾಕಿ ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಕಾಫಿ ಕೃಷಿಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಇವರು 2015ರಲ್ಲಿ ಮೂಡಿಗೆರೆ ಜೇಸಿಐ ಸದಸ್ಯರಾಗಿ ಸೇರ್ಪಡೆಯಾಗುವ ಮೂಲಕ ತಮ್ಮ ಜೇಸಿಯ ಅಭಿಯಾನ ಆರಂಭಿಸಿದ್ದಾರೆ. ಕಳೆದ 10 ವರ್ಷಗಳಿಂದ ಜೇಸಿಐ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮೂಡಿಗೆರೆ ಜೇಸಿಐ ನಿರ್ದೇಶಕರಾಗಿ, ಸಹ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, 2022ರಲ್ಲಿ ಘಟಕದ ಕಾರ್ಯದರ್ಶಿಯಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ 2024 ರಲ್ಲಿ ಪ್ರತಿಷ್ಠಿತ ಮೂಡಿಗೆರೆ ಜೇಸಿಐ ಘಟಕದ 52ನೇ ಅಧ್ಯಕ್ಷರಾಗಿ ಯಶಸ್ವಿ ಕಾರ್ಯನಿರ್ವಹಿಸಿದ್ದಾರೆ.
ಜೇಸಿಐ ವಿವಿಧ ತರಬೇತಿಗಳನ್ನು ಸಹ ಪಡೆದಿರುತ್ತಾರೆ. ಅನೇಕ ವಲಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 2022ರ ವಲಯಮಟ್ಟದ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ವಲಯದ ಅತ್ತುತ್ತಮ ಕಾರ್ಯದರ್ಶಿ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜೇಸಿಐ ಎಲ್ಲದೇ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೆ ಆದ ಸ್ನೇಹಿತರ ಬಳಗವನ್ನು ಹೊಂದಿದ್ದು ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿರುತ್ತಾರೆ.
ಇವರ ಪತ್ನಿ ದಿವ್ಯಾ ಅವರು ಮೂಡಿಗೆರೆ ಯೂರೋಕಿಡ್ಸ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು 2024ನೇ ಸಾಲಿಗೆ ಮೂಡಿಗೆರೆ ಲೇಡಿ ಜೇಸಿ ಅಧ್ಯಕ್ಷರಾಗಿರುತ್ತಾರೆ. ಇವರ ಪುತ್ರಿ ಪ್ರೇರಣ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ವಲಯ ಮಟ್ಟದ ಕಮಲ ಪತ್ರ ಪ್ರಶಸ್ತಿಗೆ ಪಾತ್ರರಾಗಿರುವ ಸುಪ್ರೀತ್ ಅವರಿಗೆ ಮೂಡಿಗೆರೆ ಜೇಸಿಐ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.


