September 11, 2026
;
soumyasree

 

 

ನೃತ್ಯ ಕ್ಷೇತ್ರದಲ್ಲಿ ಹಲವು ಸವಾಲುಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಮೂಡಿಗೆರೆಯ ಸೌಮ್ಯಶ್ರೀ ಅವರು ಜೀ ಕನ್ನಡ ವಾಹಿನಿಯ 2026ನೇ ಸಾಲಿನ *‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’* ರಿಯಾಲಿಟಿ ಶೋಗೆ ಆಯ್ಕೆಯಾಗುವ ಮೂಲಕ ಮೂಡಿಗೆರೆ ತಾಲ್ಲೂಕಿಗೆ ಹೆಮ್ಮೆ ತಂದಿದ್ದಾರೆ.

ಮೂಡಿಗೆರೆ ತಾಲೂಕಿನ ಐಸಿರಿ ಲೇಔಟ್, ಗಂಗನಮಕ್ಕಿ ನಿವಾಸಿ ಹಾಗೂ ಮೆಕ್ಯಾನಿಕ್ ಮಂಜುನಾಥ್ ಅವರ ಧರ್ಮಪತ್ನಿಯಾಗಿರುವ ಸೌಮ್ಯಶ್ರೀ ಅವರಿಗೆ ಬಾಲ್ಯದಿಂದಲೂ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಹಲವು ಪ್ರತಿಷ್ಠಿತ ನೃತ್ಯ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಹಿಂದಿ ಜೀ ವಾಹಿನಿಯಲ್ಲಿ ಪ್ರಸಾರವಾದ *‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ – ಸೂಪರ್ ಮಾಮ್’* ಕಾರ್ಯಕ್ರಮದಲ್ಲಿ ರೆಮೋ ಡಿಸೋಜಾ, ಗೀತಾ ಕಪೂರ್ ಹಾಗೂ ಗೋವಿಂದ ಅವರ ಸಮ್ಮುಖದಲ್ಲಿ ಸ್ಪರ್ಧಿಸಿ *ಫಸ್ಟ್ ರನ್ನರ್ ಅಪ್* ಸ್ಥಾನ ಗಳಿಸಿದ್ದರು. ಇದೇ ರೀತಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ *‘ಡ್ಯಾನ್ಸ್ ದಿವಾನೆ’* ಕಾರ್ಯಕ್ರಮದಲ್ಲೂ ಸೆಮಿಫೈನಲ್ ಹಂತದವರೆಗೆ ತಲುಪಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಇದರ ಜೊತೆಗೆ ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಹಾಗೂ *ಮಿಸ್ ಅಂಡ್ ಮಿಸೆಸ್ ಇಂಡಿಯಾ* ಸ್ಪರ್ಧೆಯ ಜ್ಯೂರಿಯಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಇತ್ತೀಚೆಗೆ *ಯೂಟ್ರಸ್ ಕ್ಯಾನ್ಸರ್‌ನಂತಹ ಗಂಭೀರ ಸವಾಲನ್ನು ಎದುರಿಸಿದರೂ*, ಧೈರ್ಯ ಕಳೆದುಕೊಳ್ಳದೆ ನೃತ್ಯ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ದೃಢ ಸಂಕಲ್ಪದೊಂದಿಗೆ ಸೌಮ್ಯಶ್ರೀ ಅವರು ಮುನ್ನಡೆದಿದ್ದಾರೆ. ಆರೋಗ್ಯದ ಸವಾಲುಗಳ ನಡುವೆಯೂ ತಮ್ಮ ಆತ್ಮವಿಶ್ವಾಸ ಮತ್ತು ನೃತ್ಯದ ಮೇಲಿನ ಪ್ರೀತಿಯನ್ನು ಬಿಟ್ಟುಕೊಡದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಆಡಿಷನ್‌ನಲ್ಲಿ ಭಾಗವಹಿಸಿದರು.

ಚಿಕ್ಕಮಗಳೂರಿನಲ್ಲಿ ನಡೆದ ಮೊದಲ ಹಂತದ ಆಡಿಷನ್‌ನಲ್ಲಿ ಯಶಸ್ವಿಯಾದ ಅವರು, ನಂತರದ ಹಂತದಲ್ಲಿ ಸತತ *ಐದು ಸುತ್ತುಗಳನ್ನು ಪಾಸ್* ಮಾಡುವ ಮೂಲಕ ಅಂತಿಮ ಹಂತಕ್ಕೆ ಆಯ್ಕೆಯಾದರು. ಬಳಿಕ ಬೆಂಗಳೂರಿನಲ್ಲಿ ನಡೆದ ಮೆಗಾ ಆಡಿಷನ್‌ನಲ್ಲೂ ಭಾಗವಹಿಸಿ ತಮ್ಮ ಅದ್ಭುತ ನೃತ್ಯ ಪ್ರದರ್ಶನದ ಮೂಲಕ ನಟ ಶಿವರಾಜ್‌ಕುಮಾರ್ ಅವರ ಮೆಚ್ಚುಗೆಗೆ ಪಾತ್ರರಾದರು.

ಅವರ ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ಗುರುತಿಸಿ *‘ಟೆರರ್ ಮಾಮ್’* ಎಂಬ ಬಿರುದಿನೊಂದಿಗೆ ರಿಯಾಲಿಟಿ ಶೋಗೆ ಆಯ್ಕೆ ಮಾಡಲಾಗಿದೆ. ಇದು ಮೂಡಿಗೆರೆ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ನೃತ್ಯಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಸೌಮ್ಯಶ್ರೀ ಅವರ ನೃತ್ಯ ಪ್ರದರ್ಶನಗಳು *ಈ ಶನಿವಾರ ಮತ್ತು ಭಾನುವಾರದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’* ಕಾರ್ಯಕ್ರಮದಲ್ಲಿ ಮೂಡಿಬರಲಿವೆ.

ಕಷ್ಟಗಳು ಎದುರಾದರೂ ಗುರಿಯತ್ತ ದೃಢ ಹೆಜ್ಜೆ ಇಟ್ಟರೆ ಯಶಸ್ಸು ಸಾಧ್ಯ ಎಂಬುದಕ್ಕೆ ಸೌಮ್ಯಶ್ರೀ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ. ಅವರ ನೃತ್ಯ ಪ್ರತಿಭೆ ಹಾಗೂ ಹೋರಾಟದ ಮನೋಭಾವಕ್ಕೆ ಮೂಡಿಗೆರೆ ತಾಲ್ಲೂಕಿನ ಜನತೆ ಅಭಿನಂದನೆ ಸಲ್ಲಿಸಿ, ರಿಯಾಲಿಟಿ ಶೋನಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;