ಇತ್ತೀಚೆಗೆ ನಮ್ಮನ್ನು ಅಗಲಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರ ಸಾಮಾಜಿಕ ಕಳಕಳಿ, ಸರಳ ವ್ಯಕ್ತಿತ್ವ, ಕನ್ನಡಪರ ಪ್ರೀತಿ ಅನುಕರಣೀಯವಾಗಿತ್ತು ಎಂದು ಮೂಡಿಗೆರೆ ತಾಲ್ಲೂಕು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್ ತಿಳಿಸಿದರು.

ಅವರು ಬುಧವಾರ ಮೂಡಿಗೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಡ್ಡೀಕೆರೆ ಗೋಪಾಲ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಡ್ಡೀಕೆರೆಯಂತಹ ಮಲೆನಾಡಿನ ಹಳ್ಳಿಯೊಂದರಲ್ಲಿ ಹುಟ್ಟಿ ತನ್ನ ಸ್ವಪ್ರತಿಭೆ, ನಾಯಕತ್ವ ಗುಣದಿಂದ ಗೋಪಾಲ್ ಅವರು ಮುಂದೆ ಮೈಸೂರಿನಲ್ಲಿ ತನ್ನ ಛಾಪು ಮೂಡಿಸಿದ್ದರು. ಅಲ್ಲಿನ ಸಾಂಸ್ಕೃತಿಕ ವಲಯದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ಎರಡು ಬಾರಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಅವರ ಅಕಾಲಿಕ ಅಗಲಿಕ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದರು.
ಸಾಹಿತಿ ಹಳೇಕೋಟೆ ರಮೇಶ್ ಅವರು ಮಾತನಾಡಿ ; ಮಡ್ಡೀಕೆರೆ ಗೋಪಾಲ್ ಅವರು ಅನೇಕ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದರು. ಗೋಕಾಕ್ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ನಾಡಿನ ಅನೇಕ ಹಿರಿಯ ಸಾಹಿತಿಗಳ ಸಂಘಟಕರ ಒಡನಾಟ ಗಳಿಸಿದ್ದರು. ತನ್ನ ಹೆಸರಿನಿನೊಂದಿಗೆ ಮಡ್ಡೀಕೆರೆಯ ಹೆಸರನ್ನು ಅಜರಾಮರವಾಗಿಸಿದರು. ಸಮಾಜ ಸೇವೆ ಅವರ ಉಸಿರಾಗಿತ್ತು ಎಂದರು.
ಪತ್ರಕರ್ತ ಪ್ರಸನ್ನ ಗೌಡಹಳ್ಳಿ ಮಾತನಾಡಿ ; ಪೂರ್ಣಚಂದ್ರ ತೇಜಸ್ವಿಯವರು ಮೈಸೂರನ್ನು ಬಿಟ್ಟು ಮೂಡಿಗೆರೆಗೆ ಬಂದದ್ದು, ಸರಿಸುಮಾರು ಅದೇ ಅವಧಿಯಲ್ಲಿ ಮಡ್ಡೀಕೆರೆ ಗೋಪಾಲ್ ಅವರು ಮೂಡಿಗೆರೆಯಿಂದ ಮೈಸೂರಿನ ಸಾಂಸ್ಕೃತಿಕ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಎರಡು ದೊಡ್ಡ ಸ್ಥಿತ್ಯಂತರಗಳಾಗಿದ್ದವು. ತೇಜಸ್ವಿಯವರು ಮೂಡಿಗೆರೆಯಲ್ಲಿ ನೆಲೆಸಿ ಇಲ್ಲಿನ ಪ್ರಕೃತಿ ಜನಜೀವನವನ್ನು ತಮ್ಮ ಸಾಹಿತ್ಯದ ಮೂಲಕ ಅನಾವರಣಗೊಳಿಸಿದರು. ಅತ್ತ ಮಡ್ಡೀಕೆರೆ ಗೋಪಾಲ್ ಅವರು ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಹುರುಪು ನೀಡಿದರು. ಗೋಪಾಲ್ ಅವರು ಮೈಸೂರಿನಲ್ಲಿ ನೆಲೆಸಿದ್ದರು ತನ್ನ ಹುಟ್ಟೂರು, ತನ್ನ ಬಾಲ್ಯದ ಬದುಕಿನ ಒಡನಾಟಗಳನ್ನು ಎಂದೆಂದಿಗೂ ಅತ್ಯಂತ ಆಪ್ತತೆಯಿಂದ ನೆನೆಸಿಕೊಳ್ಳುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ನಿಕಟಪೂರ್ವ ಅಧ್ಯಕ್ಷ ಶಾಂತಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ರವಿ ಕುನ್ನಹಳ್ಳಿ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕಿ ಶ್ರೀಮತಿ ಪವಿತ್ರಾ ರತೀಶ್, ಮೂಡಿಗೆರೆ ಶಿಕ್ಷಕರ ಸಂಘದ ನಿರ್ದೇಶಕಿ ಹಾಗೂ ಗೋಪಾಲ್ ಅವರ ಅಣ್ಣನ ಮಗಳು ಎಂ.ಕೆ. ವೀಣಾ, ಕಾಮರಾಜ್ ಜಕ್ಕಳಿ, ಅಶೋಕ್ ಕಡಿದಾಳು ಮುಂತಾದವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಗಳಾದ ಸುಚಿತ್ರ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು, ನವೀನ್ ವಂದಿಸಿದರು.
ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ, ಸಂಘಸಂಸ್ಥೆಗಳ ಮುಖಂಡರು, ಮಡ್ಡೀಕೆರೆ ಗೋಪಾಲ್ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದು, ಅಗಲಿದ ಚೇತನಕ್ಕೆ ಪುಷ್ಪನಮನ ಸಲ್ಲಿಸಿದರು.



