ಮೂಡಿಗೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಕೆ.ಎಂ. ರಸ್ತೆಯ ಮಟನ್ ಮಾರ್ಕೆಟ್ ಎದುರು ಬುಧವಾರ ರಾತ್ರಿ ಗ್ಯಾಸ್ ಸಿಲಿಂಡರ್‍ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಇಳಿದು ಪಲ್ಟಿಯಾದ ಘಟನೆ ನಡೆದಿದೆ.
ಶಿವಮೊಗ್ಗದ ಮಾಚೇನಹಳ್ಳಿಯ ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಲಿಮಿಟೆಡ್‍ನ ಎಲ್‍ಪಿಜಿ ಬಾಟ್ಲಿಂಗ್ ಘಟಕದಿಂದ ಭರ್ತಿ ಮಾಡಲಾದ ಅಡುಗೆ ಅನಿಲ ಸಿಲಿಂಡರ್‍ಗಳನ್ನು ಲಾರಿಯಲ್ಲಿ ತುಂಬಿಕೊಂಡು ಮಂಗಳೂರಿನತ್ತ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮೂಡಿಗೆರೆ ಪಟ್ಟಣದ ಕೆ.ಎಂ. ರಸ್ತೆಯಲ್ಲಿ ಲಾರಿ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದೆ ಎನ್ನಲಾಗಿದ್ದು, ಬಳಿಕ ಲಾರಿ ರಸ್ತೆಯಿಂದ ಕೆಳಗೆ ಇಳಿದು ಮಗುಚಿ ಬಿದ್ದಿದೆ. ಲಾರಿಯಲ್ಲಿ ಚಾಲಕ ಸೇರಿದಂತೆ ನಾಲ್ವರು ಇದ್ದರು. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಲಾರಿಯಲ್ಲಿ ಅಪಾರ ಪ್ರಮಾಣದ ಎಲ್‍ಪಿಜಿ ಸಿಲಿಂಡರ್‍ಗಳಿದ್ದರೂ ಯಾವುದೇ ಸಿಲಿಂಡರ್ ಸ್ಫೋಟಗೊಳ್ಳದೆ ಅಥವಾ ಅನಿಲ ಸೋರಿಕೆಯಾಗದೆ ಇರುವುದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಆದರೂ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೆÇಲೀಸರು ಹಾಗೂ ಅಗ್ನಿಶಾಮಕದಳ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಅಲ್ಲದೇ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಿದರು.

ಅಗ್ನಿಶಾಮಕ ದಳದವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಯಾವುದೇ ಅಪಾಯವಾಗದಂತೆ ಎಚ್ಚರಿಕೆ ವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಬಹಳ ಹೊತ್ತು ವಿದ್ಯುತ್ ನಿಲುಗಡೆ ಮಾಡಲಾಗಿತ್ತು.
ಬುಧವಾರ ರಾತ್ರಿ ಲಾರಿ ಪಲ್ಟಿಯಾಗುವ ಸಂದರ್ಭದಲ್ಲಿ ಪಟ್ಟಣದಲ್ಲಿ ಭಾರೀ ಶಬ್ದವಾಗಿದ್ದು, ಶಬ್ದವನ್ನು ಕೇಳಿ ಜನರು ತಬ್ಬಿಬ್ಬಾಗಿದ್ದರು. ನಂತರ ನೂರಾರು ಜನರು ಲಾರಿ ಪಲ್ಟಿಯಾದ ಸ್ಥಳಕ್ಕೆ ಆಗಮಿಸಿದ್ದರು.


