October 28, 2026
;
suddi6

 

 

ತಂದೆ-ತಾಯಿ ಜನ್ಮ ನೀಡಿದರೆ, ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಶಿಕ್ಷಕರು ನಮ್ಮ ಕಣ್ಣೆದುರಿನ ಜೀವಂತ ದೇವರುಗಳು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಚಿಕ್ಕಮಗಳೂರು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕøತಿಯಲ್ಲಿ `ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ’ ಎಂದು ಪೂಜಿಸುವ ಭವ್ಯ ಪರಂಪರೆಯಿದೆ. ವಿದ್ಯಾರ್ಥಿಯ ಜೀವನಕ್ಕೆ ನೈಜ ರೂಪುರೇಷೆ ನೀಡುವ ಶಿಕ್ಷಕ ವೃಂದಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಇಂದಿನ ನಿವೃತ್ತ ಶಿಕ್ಷಕರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರವಾದದ್ದು ಎಂದು ಅವರು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಮಕ್ಕಳ ಶಿಕ್ಷಣ ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು. ಪಠ್ಯದ ಜತೆಗೆ ನೈತಿಕ ಶಿಕ್ಷಣ, ಸಂಸ್ಕಾರ, ಜೀವನ ಮೌಲ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವ ಮೂಲಕ ಉತ್ತಮ ನಾಗರಿಕರನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೆÇೀಷಕರ ಮೇಲಿದೆ ಎಂದು ಹೇಳಿದರು.

ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಕ ಎಂದರೆ ಕೇವಲ ವ್ಯಕ್ತಿಯಲ್ಲ, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಸುಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ. ಮಕ್ಕಳಿಗೆ ಅಕ್ಷರ ಜ್ಞಾನ ನೀಡುವುದರ ಜತೆಗೆ ಜೀವನದ ಮೌಲ್ಯಗಳನ್ನು ಬೋಧಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಎಷ್ಟು ಅಂಕ ಗಳಿಸಿದ್ದಾರೆ, ಎಷ್ಟು ಶೇಕಡಾವಾರು ಪಡೆದಿದ್ದಾರೆ ಎಂಬುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಹೆಚ್ಚಿನ ಅಂಕ ಪಡೆದವನು ಮಾತ್ರ ಯಶಸ್ವಿ ವ್ಯಕ್ತಿಯಾಗುವುದಿಲ್ಲ. ಶಿಕ್ಷಣದ ಜತೆಗೆ ಸಂಸ್ಕಾರ, ನೈತಿಕತೆ, ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರು ಹಾಗೂ ಪೆÇೀಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿನಂತೆ ಕುಟುಂಬ ಮತ್ತು ಶಾಲೆ ಎರಡೂ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಅನ್ನದಾನ ಹಸಿವನ್ನು ನೀಗಿಸಿದರೆ, ಶಿಕ್ಷಕರು ನೀಡುವ ಅಕ್ಷರ ಜ್ಞಾನವು ಅಜ್ಞಾನವನ್ನು ನೀಗಿಸುತ್ತದೆ. ಆದರೆ ಇಂದು ಶಿಕ್ಷಕರ ಮೇಲೆ ಬೋಧನೆಯ ಜೊತೆಗೆ ಹೆಚ್ಚುವರಿ ಜವಾಬ್ದಾರಿ ಮತ್ತು ಆ್ಯಪ್‍ಗಳ ಹೊರೆ ಹೆಚ್ಚಾಗಿದ್ದು, ಇದನ್ನು ಕಡಿಮೆ ಮಾಡಲು ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಶಿಕ್ಷಕರಿಗೆ ಸಮಾಜದಲ್ಲಿ ಅತ್ಯುನ್ನತ ಗೌರವವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಶಾಲೆಗೆ ಬಂದ ತಕ್ಷಣ ಆ್ಯಪ್‍ಗಳ ಮೂಲಕ ಹಾಜರಾತಿ, ಮುಖ ಗುರುತಿಸುವಿಕೆ ದಾಖಲಿಸುವುದು, ಬಿಸಿ ಊಟ ನಿರ್ವಹಣೆ ಸೇರಿದಂತೆ ಶಿಕ್ಷಣೇತರ ಕೆಲಸಗಳ ಹೊರೆ ಹೆಚ್ಚಾಗಿದೆ. ಈ ಕುರಿತು ವಿಧಾನ ಪರಿಷತ್ತಿನಲ್ಲಿಯೂ ಧ್ವನಿ ಎತ್ತಲಾಗಿದ್ದು, ಶಿಕ್ಷಕರನ್ನು ಮಾನವೀಯತೆಯ ದೃಷ್ಟಿಯಿಂದ ಕಂಡು, ಅವರ ಕಾರ್ಯಭಾರ ತಗ್ಗಿಸುವಂತೆ ಶಿಕ್ಷಣ ಸಚಿವರಿಗೆ ಕೂಲಂಕಷವಾಗಿ ಪರಿಶೀಲಿಸಲು ವಿನಂತಿಸಲಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಎಷ್ಟೇ ದೊಡ್ಡ ಹುದ್ದೆಗೇರಿದರೂ ಆತನಲ್ಲಿ ಒಬ್ಬ ವಿದ್ಯಾರ್ಥಿ ಜೀವಂತವಾಗಿರುತ್ತಾನೆ. ಸಮಾಜವನ್ನು ಸಶಕ್ತವಾಗಿ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸುಮಾರು 1300 ರಿಂದ 1400 ಶಿಕ್ಷಕರಿದ್ದಾರೆ. ಬರಿ ಪಾಠ ಮಾಡುವುದು ಮತ್ತು ಊಟ ನೀಡುವುದಕ್ಕಷ್ಟೇ ನಮ್ಮ ಜವಾಬ್ದಾರಿ ಸೀಮಿತವಾಗಬಾರದು. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ಶಾಸಕರು ಹಾಗೂ ದಾನಿಗಳ ಸಹಕಾರ ಪಡೆದು ಶಾಲೆಗಳನ್ನು ಸಶಕ್ತಗೊಳಿಸಬೇಕು ಎಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ 2.65 ಲಕ್ಷ ಕುಟುಂಬದ ಯಜಮಾನಿಯರಿಗೆ ಮಾಸಿಕ ರೂ.52 ಕೋಟಿಯಂತೆ ಇದುವರೆಗೆ ಒಟ್ಟು ರೂ1,700 ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ತಲುಪಿಸಲಾಗಿದೆ. ಇದು ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಡಿಡಿಪಿಐ ತಿಮ್ಮರಾಜು, ಡಯಟ್ ಪ್ರಾಂಶುಪಾಲ ಸುಂದರೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳು, ಬಿಇಒ ರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ತಾಲೂಕು ಮಟ್ಟದಲ್ಲಿ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 

 

Leave a Reply

Your email address will not be published. Required fields are marked *