ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಗುರುವಾರ ಜನಾಕ್ರೋಶ ಭುಗಿಲೆದ್ದಿತು. ವರದಿ ಜಾರಿ ವಿರೋಧಿಸಿ ಕರೆ ನೀಡಲಾಗಿದ್ದ ಬಂದ್‍ಗೆ ಪಟ್ಟಣದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗಿದ್ದು, ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬಂದ್ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ಪ್ರಮುಖ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದಲ್ಲದೆ, ವಾಹನಗಳ ಸಂಚಾರವೂ ವಿರಳವಾಗಿತ್ತು. ಪರಿಣಾಮ ಪಟ್ಟಣದ ಪ್ರಮುಖ ರಸ್ತೆಗಳು ಬಹುತೇಕ ಬಿಕೋ ಎನ್ನುತ್ತಿದ್ದವು.
ಸ್ಥಳೀಯ ಸಂಘಟನೆಗಳು ಹಾಗೂ ಮಲೆನಾಡಿನ ರೈತರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್. ಪುರ ಭಾಗಗಳಿಂದ ನೂರಾರು ಮಂದಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕಸ್ತೂರಿರಂಗನ್ ವರದಿ ಜಾರಿ ಹಾಗೂ ಸರ್ಕಾರದ ಕ್ರಮಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡಿನ ಜನರ ಅಸ್ತಿತ್ವ, ಕೃಷಿ ಚಟುವಟಿಕೆ ಮತ್ತು ರೈತರ ಬದುಕಿನ ಮೇಲೆ ಕಸ್ತೂರಿರಂಗನ್ ವರದಿ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವರದಿ ಜಾರಿಗೆ ಬೆಂಬಲ ನೀಡುತ್ತಿರುವ ಪರಿಸರವಾದಿಗಳ ಧೋರಣೆಯನ್ನೂ ಅವರು ಖಂಡಿಸಿದರು.
ಮಲೆನಾಡಿನ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ವರದಿ ಜಾರಿಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ಪ್ರತಿಭಟನಾಕಾರರು, ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದೆ ವರದಿ ಜಾರಿಗೆ ಮುಂದಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಪ್ರತಿಭಟನೆಗೆ ಬೆಂಬಲ ಸೂಚಸಿ ಮಾತನಾಡಿ ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸುವ ಪ್ರಕ್ರಿಯೆ ಮತ್ತೆ ಚರ್ಚೆಯಲ್ಲಿದೆ. ಪರಿಸರ ಸಂರಕ್ಷಣೆಯ ಜೊತೆಗೆ ಜನರ ಜೀವನೋಪಾಯ ಮತ್ತು ಅಭಿವೃದ್ಧಿಯನ್ನು ರಕ್ಷಿಸುವ ಅವಶ್ಯಕತೆ ಇದೆ ಎಂದು ಹೇಳಿದರು
ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯ. ಆದರೆ ಮಲೆನಾಡಿನಲ್ಲಿ ತಲೆ ತಲಾಂತರಗಳಿಂದ ಕೃಷಿ, ತೋಟಗಾರಿಕೆ, ವಸತಿ ಹಾಗೂ ಇನ್ನಿತರೆ ಜೀವನೋಪಾಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಜನರ ಜೀವನ, ಜಮೀನು ಮತ್ತು ಹಕ್ಕುಗಳ ಮೇಲಿನ ಪರಿಣಾಮಗಳನ್ನು ಸಮಗ್ರವಾಗಿ ಪರಿಗಣಿಸಬೇಕು. ಗ್ರಾಮೀಣ ಭಾಗದ ಎμÉ್ಟೂೀ ಜನರಿಗೆ ಈ ವಿಷಯವೇ ಗೊತ್ತಿಲ್ಲ. ಶಿಫಾರಸ್ಸಿಗೂ ಮುನ್ನ ರೈತರು, ತೋಟಗಾರರು, ಗ್ರಾಮಸ್ಥರು ಮತ್ತು ಸ್ಥಳೀಯ ಸಂಸ್ಥೆಗಳ ಅಭಿಪ್ರಾಯ ಪಡೆದುಕೊಳ್ಳಬೇಕಾಗಿತ್ತು. ಯಾವುದೇ ಅಂತಿಮ ನಿರ್ಧಾರಕ್ಕೂ ಮುನ್ನ ಮಲೆನಾಡಿನ ಜನರ ಧ್ವನಿಗೆ ಆದ್ಯತೆ ನೀಡಬೇಕು ಎಂದರು.
ನಮ್ಮ ಮಲೆನಾಡು ನಮ್ಮ ಬದುಕು ನಮ್ಮ ಹಕ್ಕು. ನಮ್ಮ ನೆಲದ ಬಗ್ಗೆ ನಿರ್ಧಾರ ನಮ್ಮ ಮಾತು ಕೇಳಿದ ನಂತರವೇ ಆಗಬೇಕು. ಕೇಂದ್ರ ಸರ್ಕಾರವು ಏಳನೇ ಕರಡು ಅಧಿಸೂಚನೆ ಹೊರಡಿಸಿದ್ದು ಇದಕ್ಕೆ ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಮುಂದಾಗಿರುವುದು ಸಮಯೋಚಿತ ಕ್ರಮವಾಗಿದೆ. ಕೇಂದ್ರ ಸರ್ಕಾರದ ಈ ಹಿಂದಿನ ಎಲ್ಲ ಕರಡು ಅಧಿಸೂಚನೆಯನ್ನು ಆಕ್ಷೇಪಣೆ ಸಲ್ಲಿಸಿ ವಿರೋಧಿಸುತ್ತಲೇ ಬಂದಿದೆ. ಆದರೂ ಕೂಡಾ ಕೇಂದ್ರ ಸರ್ಕಾರ ಮಲೆನಾಡಿನ ಪರಿಸರ ಜನರಿಗೆ ಆಗುವಂಥ ತೊಂದರೆ ತಪ್ಪಿಸಲು ಯಾವುದೇ ಕ್ರಮ ಕೈಕೊಂಡಿಲ್ಲ ಎಂದು ತಿಳಿಸಿದರು.
ಈ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಗಟ್ಟಿ ಧ್ವನಿಯೆತ್ತಿ ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳಿಂದ ಆಗುವ ತೊಂದರೆಗಳನ್ನು ತಪ್ಪಿಸುವ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಸರ್ವ ಪಕ್ಷಗಳ ಹಾಗೂ ಮಲೆನಾಡಿನ ಪ್ರಮುಖ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಕಾರ್ಯೋನ್ಮುಖರಾಗಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಅಪರ ಜಿಲ್ಲಾಧಿಕಾರಿ ನಂಜುಡೇಗೌಡ ಇದ್ದರು


