ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮದ ಬಳಿ ನಡೆದಿದೆ.
ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಸುಮಾರು 35 ವರ್ಷ ವಯಸ್ಸಿನ ಹೆಣ್ಣಾನೆಯೊಂದು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ಸ್ಥಳೀಯ ನಿವಾಸಿ ಶಶಿ ಎಂಬುವವರ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆಹಾರ ಅರಸಿ ಬಂದಿದ್ದ ಕಾಡಾನೆಗಳ ಹಿಂಡು ಈ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ, ಇತರೆ ಆನೆಗಳು ಅಪಾಯದಿಂದ ಪಾರಾಗಿ ಮುಂದೆ ಸಾಗಿವೆ. ಆದರೆ ಹಿಂದೆ ಉಳಿದಿದ್ದ ಹೆಣ್ಣಾನೆಯ ಸೊಂಡಿಲು ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದೆ. ಪರಿಣಾಮ ತೀವ್ರ ವಿದ್ಯುತ್ ಪ್ರವಹಿಸಿ ಆನೆ ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆನೆಯ ಸಾವಿಗೆ ಕಾರಣ ಹಾಗೂ ಇತರೆ ಅಂಶಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ಬಳಿಕ ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


