ಮಣ್ಣ ಬಿಟ್ಟು ಮಡಕೆಯಿಲ್ಲ, ತನ್ನ ಬಿಟ್ಟು ದೇವರಿಲ್ಲ ಎಂಬ ಮಾತಿನಂತೆ, ನಮ್ಮ ಒಳಗಿರುವ ದೇವರನ್ನು ಅರಿಯುತ್ತಾ ಸಾಗುವ, ಕಲಿಯುವ, ಬೆಳೆಯುವುದೇ ನಿಜವಾದ ಬದುಕು ಎಂದು ಬಸವತತ್ವ ಪೀಠದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ತಿಳಿಸಿದರು.
ಚಿಕ್ಕಮಗಳೂರು ಕೆಂಪನಹಳ್ಳಿಯ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿ ನಡೆದ ಶೃಂಗೇರಿ ಜಗದ್ಗುರುಗಳಾಗಿದ್ದ ಅವಧೂತ ಸದ್ಗುರು ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳವರ ಆರಾಧನೆ ಸಂದರ್ಭ ಕಲ್ಕಟ್ಟೆ ಗಾನ ದೀವಿಗೆ 50ನೇ ಭಕ್ತಿಗೀತೆ ಲೋಕಾರ್ಪಣೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಾಧು ಸಂತರು ತಪಸ್ಸಿನಲ್ಲಿ ನಿರತರಾಗಿದ್ದುದು ಆತ್ಮ ಶೋಧನೆಗಾಗಿ. ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಅಷ್ಟಸಿದ್ಧಿಗಳನ್ನು ಪಡೆದವರು. ಏಕಕಾಲದಲ್ಲಿ ಹಲವು ಕಡೆ ಕಾಣಿಸಿಕೊಂಡಂಥ ತ್ರಿಕಾಲ ಜ್ಞಾನಿಗಳಾಗಿದ್ದವರು. ಅವರಿಂದ ಮಂತ್ರೋಪದೇಶ ಪಡೆದ ಕಲ್ಕಟ್ಟೆ ಮಲ್ಲೇಶಯ್ಯನವರ ಪುತ್ರ ನಾಗರಾಜರಾವ್ ಕಲ್ಕಟ್ಟೆ ಕುಟುಂಬ ಸಾಂಸ್ಕೃತಿಕ ಚಟುವಟಿಕೆಗಳನ್ನು ತಪಸ್ಸಿನಂತೆ ನಡೆಸಿಕೊಂಡು ಬರುತ್ತಿದೆ ಎಂದರು.
ಪ್ರತಿ ಮನೆಗಳೂ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಚಿಂತನ ಮಂಥನಗಳ ಕೇಂದ್ರವಾಗಬೇಕು. ಅಲ್ಲಮ ಪ್ರಭುವಿನ ಬೆಡಗಿನ ವಚನವೊಂದರಲ್ಲಿರುವಂತೆ ನಮ್ಮ ಅಹಂಕಾರ ಕಳೆದುಕೊಂಡರೆ ಜ್ಞಾನಿಗಳಾಗುತ್ತೇವೆ. ಸತ್ಸಂಗದಿಂದ ಹೊಸ ಸುಜ್ಞಾನ ಗೋಚರವಾಗುತ್ತದೆ ಎಂದು ನುಡಿದರು.
ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕಲ್ಕಟ್ಟೆ ಪುಸ್ತಕದ ಮನೆ ಚಿಕ್ಕಮಗಳೂರಿನ ಸಾಂಸ್ಕೃತಿಕ ಹೆಮ್ಮೆ ಎನಿಸಿದೆ. ದಣಿವರಿಯದ ರೀತಿ ಸಮಾಜಕ್ಕಾಗಿ ದುಡಿಯುತ್ತಿರುವ ಸಾಂಸ್ಕೃತಿಕ ಮನಸ್ಸಿನ ಈ ಕುಟುಂಬದ ಸದಸ್ಯರು ನಿಜಕ್ಕೂ ಮಾದರಿ ವ್ಯಕ್ತಿತ್ವದವರು. ದೇವಜ್ಞಾನ, ನುಡಿ ತರಂಗಗಳನ್ನು ನಿತ್ಯವೂ ಬರೆಯುತ್ತಿರುವ ಕಲ್ಕಟ್ಟೆಯವರು ಮಲೆನಾಡಿನಲ್ಲರಳಿದ ಮಹಾಪ್ರತಿಭೆ ಎಂದರು.
ಚುಟುಕು ಕವಿ ಅರವಿಂದ ದೀಕ್ಷಿತ್ ಗುರುವಿನ ಮಹತ್ವವನ್ನು ವಿವರಿಸಿದರೆ, ಲಯನ್ಸ್ ಸಂಸ್ಥೆಯ ಜಿ.ರಮೇಶ್ `ದೇವರ ತೋರಿಸು ಸದ್ಗುರು’ ಗೀತೆಯ ಸಾಹಿತ್ಯವನ್ನು ವಿಶ್ಲೇಷಿಸಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ನಾರಾಯಣ ಸ್ವಾಮಿ ಮಾತನಾಡಿ, ಪುಸ್ತಕದ ಮನೆಗೆ ಗುರುವು ಪ್ರವೇಶಿಸಿರುವುದರಿಂದ ಜ್ಞಾನ ಪ್ರಕಾಶ ಹೆಚ್ಚಾಗಿದೆ. ಲಯನ್ಸ್ ಸಂಸ್ಥೆಗೆ ಸೇವೆ ಮತ್ತು ಸಂಸ್ಕೃತಿ ಎರಡೂ ಪ್ರಧಾನ ಆಯ್ಕೆಗಳು ಎಂದರು.
ಇದೇ ವೇಳೆ ಲಯನ್ಸ್ ಸಂಸ್ಥೆಯ ವತಿಯಿಂದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಸಂಗೀತ ವಿಭಾಗಕ್ಕೆ ನೀಡಿದ ತಬಲವನ್ನು ಕಲಾವಿದ ಆನಂದ್ ಸ್ವೀಕರಿಸಿದರು. ಶ್ರೀಲಂಕಾದಲ್ಲಿ ನಡೆವ ಸಾಂಸ್ಕೃತಿಕ ಉತ್ಸವಕ್ಕೆ ತೆರಳುತ್ತಿರುವ ಕಲ್ಕಟ್ಟೆ ಪುಸ್ತಕದ ಮನೆಯ ವೈಷ್ಣವಿ ಎನ್.ರಾವ್ರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಗಾಯಕ ಸಾಯಿ ಸತೀಶ್ ಅವರ ಗುರು ಮಹತ್ವ ಸಾರುವ ಗೀತಗಾಯನ ಸಭಿಕರನ್ನು ಭಾವ ಪರವಶಗೊಳಿಸಿತು.
ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಭಗವತಿ ಹರೀಶ್, ಖಜಾಂಚಿ ಅಣ್ಣಾವೇಲು, ಉಪಾಧ್ಯಕ್ಷೆ ಕವಿತ ಜಿ.ರಮೇಶ್, ಪ್ರಾಂತೀಯ ರಾಯಭಾರಿ ವೆಂಕಟೇಶ್, ಲಯನ್ಸ್ ಸಂಸ್ಥೆಯ ಜಿ.ಕುಮಾರ್, ಬಾಳೆಹೊನ್ನೂರಿನ ಉಷಾಕೃಷ್ಣ, ಸಾಹಿತಿ ರಮೇಶ್ ಬೊಂಗಾಳೆ, ಗಾಯಕ ರಾಯ ನಾಯಕ್, ರಂಗ ನಿರ್ದೇಶಕಿ ಪ್ರತಿಭಾ, ನೃತ್ಯ ಗುರು ವೀಣಾ ಅರವಿಂದ್, ಶ್ರೀ ಶ್ರೀಕಂಠೇಶ್ವರ ಕಲಾ ಮಂದಿರದ ಪ್ರಧಾನ ಗುರು ಸುಮನ ರಾಮಚಂದ್ರ, ಹೆಚ್.ಸಿ.ಮಹೇಶ್, ಲಯನ್ಸ್ ಸಂಸ್ಥೆಯ ಡಾ.ಗೌರಿ ವರುಣ್, ವೆಂಕಟೇಶ ಪೈ, ಶಿಕ್ಷಕಿ ಕಮಲಾಕ್ಷಿ, ಕೇದಾರ, ಕಾಫಿ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಗಳವರಿಗೆ ಕಲ್ಕಟ್ಟೆ ಹಾಗೂ ಲಯನ್ಸ್ ಸಂಸೆ ್ಥವತಿಯಿಂದ ಭಕ್ತಿಗೌರವದ ಸಮ್ಮಾನ ಸಮರ್ಪಿಸಲಾಯಿತು.
ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ಕಲ್ಕಟ್ಟೆ ಪುಸ್ತಕದ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜರಾವ್ ವಂದಿಸಿದರು.


