ಕಾಫಿನಾಡಿನ ಪ್ರಕೃತಿ ಸೌಂದರ್ಯದ ನಡುವೆ ಮ್ಯಾರಾಥಾನ್ ಓಟ ಮತ್ತು ಸೈಕ್ಲಿಂಗ್ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ ಅಕ್ಟೋಬರ್ 25ರಂದು ಮೂಡಿಗೆರೆಯಲ್ಲಿ “ಮುದ್ರೆಮನೆ ಚಿಕ್ಕಮಗಳೂರು ವೈಲ್ಡರ್ನೆಸ್ ಮ್ಯಾರಥಾನ್ ಮತ್ತು ಸೈಕ್ಲಿಂಗ್ 2026” (Mudremane Chikkamagaluru Wilderness Marathon & Cycling 2026) ಕ್ರೀಡಾಕೂಟ ಆಯೋಜಿಸಲಾಗಿದ್ದು, ಈಗಾಗಲೇ 1,200ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದು, ಕ್ರೀಡಾಕೂಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕ್ಲಬ್ನ ಕಾರ್ಯದರ್ಶಿ ಡಾ. ಕೌಶಿಕ್ ತಿಳಿಸಿದರು.
ಚಿಕ್ಕಮಗಳೂರು ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕ್ರೀಡೆ, ಪ್ರಕೃತಿ ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದರ ಜತೆಗೆ, ಮಲೆನಾಡಿನ ನೈಸರ್ಗಿಕ ಸೌಂದರ್ಯ ಮತ್ತು ಕಾಫಿ ಸಂಸ್ಕೃತಿಯನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದರು.
ಕ್ರೀಡಾಕೂಟಕ್ಕೆ ಮುದ್ರೆಮನೆ ಕಾಫಿ ಅಂಡ್ ಸ್ಪೈಸಸ್ ಟೈಟಲ್ ಸ್ಪಾನ್ಸರ್ ಆಗಿದ್ದು, ಅನೇಕ ಸಂಸ್ಥೆಗಳು ಪ್ರಾಯೋಜಕತ್ವ ನೀಡಿವೆ. ಮೂಡಿಗೆರೆ ಕಾಫಿ ಕೋರ್ಟ್ ವೆನ್ಯೂ ಸ್ಪಾನ್ಸರ್ ಆಗಿದ್ದು, ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕರ ವೀಕ್ಷಣೆಗೆ ಮೂಡಿಗೆರೆ ಮಾನ್ಸಿ ಎನ್ ಕ್ಲೇವ್ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾ ಆಸಕ್ತರು ಅಲ್ಲಿಗೆ ಆಗಮಿಸಿ ವೀಕ್ಷಿಸಬಹುದಾಗಿದೆ.
ಈ ವರ್ಷದ ಕ್ರೀಡಾಕೂಟದ ಪ್ರಮುಖ ವಿಶೇಷವೆಂದರೆ ಮ್ಯಾರಥಾನ್ ಮಾರ್ಗಕ್ಕೆ ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಮ್ಯಾರಥಾನ್ಸ್ ಅಂಡ್ ಡಿಸ್ಟೆನ್ಸ್ ರೇಸಸ್ ಸಂಸ್ಥೆಯ ಪ್ರಮಾಣೀಕರಣ ದೊರೆತಿರುವುದು. ಈ ಮಾನ್ಯತೆಯು ಮಾರ್ಗದ ಅಳತೆ ಮತ್ತು ಸ್ಪರ್ಧೆಯ ಗುಣಮಟ್ಟಕ್ಕೆ ಮಹತ್ವದ ಸೇರ್ಪಡೆಯಾಗಲಿದೆ. ಪ್ರಮಾಣೀಕರಣಕ್ಕೆ ಒಳಪಟ್ಟಿರುವ ನಿರ್ದಿಷ್ಟ ಮಾರ್ಗ ಹಾಗೂ ದೂರದೆ ವಿವರಗಳನ್ನು ಅಧಿಕೃತವಾಗಿ ದೃಢೀಕರಿಸಿ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಭಾಗವಹಿಸುವ ಪ್ರತಿಯೊಬ್ಬರಿಗೂ ಕ್ರೀಡಾಕೂಟದ ಟಿ-ಶರ್ಟ್, ಮೆಡಲ್ (Finisher Medal), ಉಪಹಾರ (Breakfast), ಹೈಡ್ರೇಶನ್ ಸಪೋರ್ಟ್ ಹಾಗೂ ರೇಸ್ ದಿನದ ಫೋಟೋಗಳು ಲಭ್ಯವಿರಲಿವೆ.
ಮ್ಯಾರಥಾನ್ನಲ್ಲಿ 5 ಕಿ.ಮೀ., 10 ಕಿ.ಮೀ., 21 ಕಿ.ಮೀ. ಮತ್ತು 42 ಕಿ.ಮೀ. ವಿಭಾಗಗಳನ್ನು ಆಯೋಜಿಸಲಾಗಿದೆ. ಆರಂಭಿಕ ಓಟಗಾರರಿಂದ ಹಿಡಿದು ಅನುಭವಿ ಮ್ಯಾರಥಾನ್ ಸ್ಪರ್ಧಿಗಳವರೆಗೆ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ನೋಂದಾಯಿಸಿಕೊಂಡಿರುವ ಹಿನ್ನೆಲೆಯಲ್ಲಿ 5ಕೆ ಮತ್ತು 10ಕೆ ವಿಭಾಗಗಳ ನೋಂದಣಿ ಮುಕ್ತಾಯಗೊಂಡಿದೆ. 21ಕೆ ಹಾಫ್ ಮ್ಯಾರಥಾನ್ ಹಾಗೂ 42ಕೆ ಪೂರ್ಣ ಮ್ಯಾರಥಾನ್ ವಿಭಾಗಗಳಿಗೆ ನೋಂದಣಿ ಮುಂದುವರಿದಿದೆ. ಆಸಕ್ತರು 8073052332 ಸಂಖ್ಯೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯ ಬಹುದು.
ಮ್ಯಾರಥಾನ್ನೊಂದಿಗೆ ಸೈಕ್ಲಿಂಗ್ ಸ್ಪರ್ಧೆಗಳಿಗೂ ಆದ್ಯತೆ ನೀಡಲಾಗಿದೆ. ಇಂಡಿವಿಜುವಲ್ ಟೈಮ್ ಟ್ರಯಲ್ (ITT) ವಿಭಾಗದಲ್ಲಿ ನಿಗದಿತ ಮಾರ್ಗವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯದ ಆಧಾರದಲ್ಲಿ ಸೈಕ್ಲಿಸ್ಟ್ಗಳ ಸಾಮರ್ಥವನ್ನು ಅಳೆಯಲಾಗುತ್ತದೆ.
ಫನ್ ರೈಡ್ ವಿಭಾಗದಲ್ಲಿ ಸ್ಪರ್ಧಾತ್ಮಕ ಒತ್ತಡವಿಲ್ಲದೆ ಸೈಕ್ಲಿಂಗ್ ಆನಂದವನ್ನು ಅನುಭವಿಸುತ್ತಾ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಅವಕಾಶವಿದೆ.ಕ್ರೀಡಾಕೂಟವು ಕೇವಲ ಸ್ಪರ್ಧೆಗೆ ಸೀಮಿತವಾಗದೆ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಪ್ರವಾಸೋದ್ಯಮದ ಜಿಲ್ಲೆಯ ಬೆಳವಣಿಗೆಗೂ ಸಹಕಾರಿಯಾಗಲಿದೆ.
ಸ್ಪರ್ಧಿಗಳು ಮತ್ತು ಅವರ ಕುಟುಂಬ ಸದಸ್ಯರು ಆಗಮಿಸುವುದರಿಂದ ಸ್ಥಳೀಯ ಹೋಟೆಲ್ ಗಳು, ಹೋಂಸ್ಟೇಗಳು, ರೆಸ್ಟೋರೆಂಟ್ಗಳು, ಸಾರಿಗೆ ಸೇವೆಗಳು ಮತ್ತು ಇತರ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ ಎಂದರು.
ಫಿಟ್ ಇಂಡಿಯಾ ಚಾಂಪಿಯನ್ ಹಾಗೂ ಚಿತ್ರನಟಿ ರಾಗಿಣಿ ದ್ವಿವೇದಿ ಮತ್ತು ಚಲನಚಿತ್ರ ನಟ ಗುರುನಂದನ್ ಈ ಕ್ರೀಡಾಕೂಟಕ್ಕೆ ಸಾಥ್ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ನ ಅಧ್ಯಕ್ಷ ಸಾಂಜಿತ್, ಉಪಾಧ್ಯಕ್ಷ ಜಾವೀದ್, ಖಜಾಂಚಿ ನಂದನ್, ಸುರೇಂದ್ರ, ಸಂದೇಶ್, ಪ್ರಕಾಶ್ ಉಪಸ್ಥಿತರಿದ್ದರು.


