ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಅತ್ಯಂತ ಮಹತ್ವದ್ದಾಗಿದೆ. ಆದರೆ ಎಸ್ಐಆರ್ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜೇಗೌಡ ದೂರಿದರು.
ಅವರು ಶುಕ್ರವಾರ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಮತದಾರರ ಪಟ್ಟಿಯ ಎಸ್ಐಆರ್ ಪ್ರಕ್ರಿಯೆಯಲ್ಲಿ ಕೇಂದ್ರ ಬಿಜೆಪಿ ಸರಕಾರ ವಾಮಾ ಮಾರ್ಗದ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಿಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮೂಲಕ ತಂತ್ರ ನಡೆಸುತ್ತಿದೆ. ಇದರಿಂದ ದೇಶದಲ್ಲಿ ಸುಮಾರು ರಾಜ್ಯದಲ್ಲಿ 95 ಲಕ್ಷ ಸೇರಿದಂತೆ ದೇಶದಲ್ಲಿ 13 ಕೋಟಿಗೂ ಅಧಿಕ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುತಿದ್ದಾರೆ. ಇದರ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ದದಲ್ಲಿ ದೆಹಲಿಯಲ್ಲಿ ಹೋರಾಟ ನಡೆಯುತ್ತಿದ್ದು, ಕೇಂದ್ರದ ಬಿಜೆಪಿ ಸರಕಾರದ ದುರಾಡಳಿತವನ್ನು ಜನರು ದಿಕ್ಕರಿಸಲು ಆರಂಭಿಸಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್.ಜಯರಾಂಗೌಡ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ತಪ್ಪಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಅರ್ಹ ನಾಗರಿಕರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು. ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹಾಗೂ ನಿಷ್ಪಕ್ಷಪಾತತೆಯನ್ನು ಖಚಿತಪಡಿಸಬೇಕು. ಈ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ, ಅರ್ಹ ನಾಗರಿಕರ ಮತದಾನದ ಹಕ್ಕು ಮತ್ತು ಸಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಕುನ್ನಳ್ಳಿ, ಹಿರಿಯ ಮುಖಂಡ ಡಿ.ಎಸ್.ರಘು, ಅಶ್ವತ್ ಮಾಕೋನಹಳ್ಳಿ, ಅಯೂಬ್ ಹಾಜಿ, ಸಂಪತ್ಕುಮಾರ್, ಮೆಲ್ವಿನ್ ಲಾರ್ಸಾದೋ, ನಿಶಾಂತ್ ಪಟೇಲ್, ಬಿ.ಕೆ.ಜಯಮ್ಮ, ಚಂದ್ರು ಒಡೆಯರ್, ಸುರೇಂದ್ರ ಉಗ್ಗೇಹಳ್ಳಿ, ಸುಧೀರ್ ಚಕ್ರಮಣಿ, ಅರುಣ್ ಗುತ್ತಿ, ಶಿವಕುಮಾರ್, ಷಣ್ಮುಕಾನಂದ, ಚಂದ್ರು ಹಳೇಕರೆ, ಆಶ್ರೀತ್, ಸಂಜೀವ, ಶ್ರೀನಿವಾಸ್, ಗೋಪಾಲ್, ಹರೀಶ್ ಸಬ್ಬೇನಹಳ್ಳಿ, ರೋಹಿತ್ ಹೊಸಳ್ಳಿ, ಅನಿಲ್, ದೀಕ್ಷಿತ್, ಸುಬೋದ್, ಸುಬ್ರಹ್ಮಣ್ಯ, ಆಶಾ, ಕೋಮಲಾ, ಬಿಂದು, ಜಾನಕಿ, ಗೀತಾ, ಸುಶೀಲಾ ಮತ್ತಿತರರಿದ್ದರು.


