October 24, 2026
;
23Mudigere1A

 

 

ಬ್ರಹ್ಮಶ್ರೀ ನಾರಾಯಣ ಗುರು ಸಮಾಜದವರು ಇನ್ನಷ್ಟು ಸಂಘಟಿತರಾಗುವ ಜತೆಗೆ ಮುಂದಿನ 50 ವರ್ಷದಲ್ಲಿ ನಮ್ಮ ಸಮಾಜ ಉನ್ನತ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕೆಂಬ ಕನಸಿಟ್ಟುಕೊಳ್ಳಬೇಕೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಏರ್ಪಡಿಸಿದ್ದ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಬಾರದೆಂಬ ಕಾರಣಕ್ಕೆ ನಾನು ಶಾಸಕಿಯಾಗಿ ಕೆಲವೊಂದು ಕಟುಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ಎಷ್ಟೇ ಟೀಕೆಗಳು ಬಂದರೂ ಅದನ್ನು ಸ್ವೀಕಾರ ಮಾಡಿಕೊಂಡು ಎಲ್ಲಾ ಜನಾಂಗದ  ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಜತೆಗೆ ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದೇನೆ. ಮುಖ್ಯವಾಗಿ ಎಲ್ಲಾ ಜನಾಂಗದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಐಎಎಸ್, ಕೆಎಎಸ್, ಡಾಕ್ಟರ್ ಸೇರಿದಂತೆ ಉನ್ನತ ಹುದ್ದೆ ಹಾಗೂ ಉದ್ಯಮಿಗಳನ್ನಾಗಿ ಮಾಡಲು ಪೋಷಕರು ಶ್ರಮಿಸಬೇಕೆಂದು ಸಲಹೆ ನೀಡಿದರು.

ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಮಾಜ ಕಟ್ಟುವಂತಹ ಉನ್ನತ ಮಟ್ಟದಲ್ಲಿ ನಮ್ಮ ಸಮಾಜದ ಜನರು ಬೆಳೆದು ನಿಂತಿರುವುದು ಶ್ಲಾಘನೀಯ. ನಮ್ಮ ಸಮಾಜ ಇವತ್ತು ತನ್ನಷ್ಟಕ್ಕೆ ಸಂಘಟಿತರಾಗಿ ಸಾಮಾಜಿಕವಾಗಿ ತನ್ನ ಕಾಲ ಮೇಲೆ ನಿಲ್ಲುವಂತಹ ಶಕ್ತಿ ಪಡೆದುಕೊಂಡಿದೆ. ಬಂಗಾರಪ್ಪ, ಜನಾರ್ಧನ ಪೂಜಾರಿ, ಜಾನಪ್ಪ, ಕಾಗೂಡು ತಿಮ್ಮಪ್ಪ ಅವರು ಸೇರಿದಂತೆ ಅನೇಕ ಮಂದಿ ನಮ್ಮ ಸಮಾಜದವರೇ ಆಗಿದ್ದಾರೆ. ಅಲ್ಲದೇ ಎಷ್ಟೋ ಮಂದಿ ಸಮಾಜದವರು ಉನ್ನತ ಹುದ್ದೆ ಪಡೆದಿರುವುದನ್ನು ನಾವು ಕಾಣುತ್ತಿದ್ದೇವೆ. ಈ ರೀತಿ ಪ್ರತಿಯೊಂದು ಕುಟುಂಭದಲ್ಲಿ ಉನ್ನತವಾಗಿ ಬೆಳೆಯಬೇಕು.  ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶವನ್ನು ಎಲ್ಲರೂ ಪಾಲನೆ ಮಾಡಬೇಕೆಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಸಂಘ ಸುವರ್ಣ ಮಹೋತ್ಸವ ಆಚರಿಸಿಕೊಂಡು ಬಂದಿದೆ ಎಂದರೆ ಅದರಲ್ಲಿ ಹಿರಿಯರ ಶ್ರಮವನ್ನು ತಿಳಿದುಕೊಳ್ಳಬೇಕಿದೆ. ಮುಂದಿನ ದಿನದಲ್ಲಿ ಸಮಾಜ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಹಾಗೂ ಅಭಿವೃದ್ಧಿ ಹೊಂದಲು ಎಲ್ಲರೂ ಕೈ ಜೋಡಿಸಬೇಕು. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್‍ಗಳಿಗೆ ಮಾರು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಕಾರ್ಯ ಪೋಷಕರು ಮಾಡಬೇಕೆಂದು ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಆರ್.ಪದ್ಮರಾಜ್, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ವೇದಕುಮಾರ್ ಮಾತನಾಡಿದರು.     ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಗಂಗನಮಕ್ಕಿವರೆಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಮನೋಜ್ ಕುಮಾರ್ ವಹಿಸಿದ್ದರು. ರಕ್ಷಾ ಪೌಂಡೇಶನ್ ಸಂಸ್ಥಾಪಕಿ ವಿಭಾ ಸುಷ್ಮಾ, ಸುರೇಶ್‍ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ದಯಾನದ್ ಯೋಗೇಶ್ ಪೂಜಾರಿ, ಸದಾನಂದ ಪೂಜಾರಿ, ಎಚ್.ಎಂ.ಸತೀಶ್, ದೀಪಕ್ ದೊಡ್ಡಯ್ಯ, ಪೃಥ್ವಿ ಸಾಗರ್, ಕೇಶವ ಸುವರ್ಣ, ಎಂ.ಜಿ.ನಾಗರತ್ನ, ಗಂಗಮ್ಮ, ಗಣೇಶ್ ಪೂಜಾರಿ, ಲಕ್ಷ್ಮಣ್‍ಪೂಜಾರಿ, ಸುಂದರ್ ಪೂಜಾರಿ, ಭರತ್ ಪೂಜಾರಿ, ಯಶೋಧಾ ರತ್ನಾಕರ, ರೂಪಾ ಅಶೋಕ್, ರೇವತಿ ನೀಲಯ್ಯ ಮತ್ತಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪಟ್ಟಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ  ಸುವರ್ಣ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.

 

 

Leave a Reply

Your email address will not be published. Required fields are marked *