October 24, 2026
;
muslim

 

 

ಜಿಪಂ 5 ಮತ್ತು ತಾಪಂನ 9 ಕ್ಷೇತ್ರದ ಪೈಕಿ ಎಲ್ಲಾ ಕ್ಷೇತ್ರದಲ್ಲಿ ಮುಸ್ಲಿಮರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯೊಡ್ಡಲು ವ್ಯವಸ್ಥಿತ ಪಿತೂರಿ ನಡೆದಿದೆ. ಇಂತಹ ಸಂಚಿನ ವಿರುದ್ಧ ಧ್ವನಿ ಎತ್ತದಿದ್ದರೆ ಮುಸ್ಲಿಮರನ್ನು ಚುನಾವಣಾ ರಾಜಕೀಯದಿಂದ ಹೊರದಬ್ಬುವ ಭೀತಿಯಿದೆ. ಕರಡು ಮೀಸಲಾತಿ ಪಟ್ಟಿಯನ್ನು ಸರ್ಕಾರ ಹಿಂಪಡೆದು ಖಾಯಂ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಮೂಡಿಗೆರೆ ತಾಲೂಕಿನ ಮುಸ್ಲಿಂ ಮುಖಂಡರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಚರ್ಚಿಸಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್ ಮಾತನಾಡಿ, ಮೂಡಿಗೆರೆ ತಾಲೂಕಿನ 5 ಕ್ಷೇತ್ರದಲ್ಲಿ ಕರಡು ಮೀಸಲಾತಿ ಪಟ್ಟಿಯ ಪ್ರಕಾರ ಸಾಮಾನ್ಯ ಮಹಿಳೆ 2, ಪ.ಜಾತಿ 1, ಪ.ಪಂಗಡ ಮಹಿಳೆ 1, ಸಾಮಾನ್ಯ ವರ್ಗಕ್ಕೆ 1. ತಾಪಂ 9 ಸ್ಥಾನದ ಪೈಕಿ ಸಾಮಾನ್ಯ 3, ಸಾಮಾನ್ಯ ಮಹಿಳೆ 2, ಪ.ಜಾತಿ ಸಾಮಾನ್ಯ 1, ಪ.ಜಾತಿ ಮಹಿಳೆ 2, ಪ.ಪಂಗಡ ಮಹಿಳೆ 1. ಹೀಗೆ ಮೀಸಲಾತಿ ಪ್ರಕಟಿಸಲಾಗಿದೆ. ಬಿಸಿಎಂ(ಎ) ವರ್ಗಕ್ಕೆ 1 ಸ್ಥಾನವನ್ನು ಕೂಡ ಕರಡು ಮೀಸಲಾತಿ ಪಟ್ಟಿಯಲ್ಲಿ ಪ್ರಕಟಿಸಿಲ್ಲ. ಇದರಿಂದ ಮುಸ್ಲಿಮರು ಚುನಾವಣಾ ರಾಜಕೀಯದಿಂದ ವಂಚಿತವಾಗಲಿದ್ದಾರೆ. ಜಿಪಂ 5 ಕ್ಷೇತ್ರದ ಪೈಕಿ ಬಿಸಿಎಂ(ಎ) ವರ್ಗಕ್ಕೆ 2. ತಾಪಂ 9 ಕ್ಷೇತ್ರದ ಪೈಕಿ ಬಿಸಿಎಂ(ಎ) ವರ್ಗಕ್ಕೆ 3 ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು. ಕರಡು ಮೀಸಲಾತಿಗೆ ಅ. 19ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ರಾಜಕೀಯ ಪಕ್ಷಗಳಲ್ಲಿರುವ ಮುಸ್ಲಿಂ ಮುಖಂಡರು ಆಕ್ಷೇಪಣೆ ಸಲ್ಲಿಸಿದ್ದಾರೆ. ಸರ್ಕಾರ ಕರಡು ಮೀಸಲಾತಿ ಪಟ್ಟಿಯನ್ನು ಮಾರ್ಪಾಡುಗೊಳಿಸಿ ಖಾಯಂ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಮುಖಂಡ ಮಹಮ್ಮದ್ ಹನೀಫ್ ಹೈದ್ರೋಸ್ ಮಾತನಾಡಿ, ಮುಸ್ಲಿಮರಿಗೆ ಸಾಂವಿಧಾನಿಕವಾದ ಯಾವುದೆ ಉನ್ನತ ಹುದ್ದೆಯನ್ನು ನೀಡಲು ಸರ್ಕಾರ ಹಿಂಜರಿಯುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಕೂಡ ಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ಇದು ಸರಿಯಲ್ಲ. ಈಗ ಹೊರಡಿಸಿರುವ ಕರಡು ಮೀಸಲಾತಿ ಪಟ್ಟಿಯನ್ನು ಸರ್ಕಾರ ಹಿಂಪಡೆದು ಹೊಸದಾಗಿ ಮೀಸಲಾತಿ ಪ್ರಕಟಿಸಬೇಕು. ತಾಲೂಕಿನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದು ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಬಿಸಿಎಂ(ಎ) ಮೀಸಲಾತಿ ಜಾರಿಗೊಳಿಸಿ ಜಿಪಂ, ತಾಪಂ ಮತ್ತು ಗ್ರಾಪಂ ಚುನಾವಣೆಯಲ್ಲಿ ಮುಸ್ಲಿಮರು ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಮುಖಂಡ ಫಾರೂಕ್ ಬಣಕಲ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ, ಮುಸ್ಲಿಮರ ಮತವನ್ನು ಮತಪಟ್ಟಿಯಿಂದ ಕೈಬಿಡಲು ಕೆಲವರು ಸುಳ್ಳು ಅರ್ಜಿ ಸಲ್ಲಿಸಿದ್ದಾರೆ. ತಾಲೂಕಿನಲ್ಲಿ ಈ ರೀತಿ 600ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯಲ್ಲಿನ ಅಂಶವನ್ನು ಬಿಎಲ್ಓಗಳು ಪರಿಶೀಲಿಸಿದಾಗ, ಸಲ್ಲಿಕೆಯಾಗಿರುವ ಅರ್ಜಿಗಳೆಲ್ಲವೂ ಸುಳ್ಳು ಎಂದು ಕಂಡು ಬಂದಿದೆ. ಮುಸ್ಲಿಮರು ಗ್ರಾಮದಲ್ಲಿ ವಾಸವಿದ್ದರೂ ಕೂಡ ಅವರು ಗ್ರಾಮದಲ್ಲಿಲ್ಲ ಎಂದು ಕೆಲವರು ಸುಳ್ಳು ಅರ್ಜಿ ನೀಡಿದ್ದರು. ಇಂತಹ ಸುಳ್ಳು ಅರ್ಜಿ ನೀಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಸುಳ್ಳು ಅರ್ಜಿ ಸಲ್ಲಿಸಿದವರ ವಿರುದ್ಧ ಸರ್ಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರಡು ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಿ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ  ಸ್ಪರ್ಧಿಸಲು ಮುಸ್ಲಿಮರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಗುರುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಹಿತ ಉನ್ನತ ಮಟ್ಟದ ಅಧಿಕಾರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಮುಸ್ಲಿಂ ಮುಖಂಡರಾದ ಎಂ.ಎಚ್.ಮಹಮ್ಮದ್ ಹನೀಫ್, ಜಾಕಿರ್ ಹುಸೇನ್, ಎ.ಎಂ.ಶರೀಫ್, ಗೌಸ್ ಮೊಹಿದ್ದೀನ್, ಅಬ್ರಾರ್ ಅಹಮದ್, ಅಕ್ರಮ್ ಹಾಜಿ, ಇರ್ಫಾನ್, ಆಸಿಫ್ ಬಾಪುನಗರ, ಜಾಕಿರ್ ಅಲಿ ಖಾನ್, ಹನೀಫ್ ಹಾಜಿ, ಆದಂ, ಫಾರೂಕ್, ಅಮ್ಜದ್, ಕೆ.ಪಿ.ಖಾಲಿದ್, ಎಂ.ಯು.ಶರೀಫ್, ಅಶ್ರಫ್, ಅಜ್ಮಲ್, ಸಾಧಿಕ್ ಇತರರಿದ್ದರು.

 

 

Leave a Reply

Your email address will not be published. Required fields are marked *