October 24, 2026
;
News 1

 

 

ಕೇಂದ್ರ ಸರ್ಕಾರ ಹೊಸ ಇಪಿಎಫ್ ಯೋಜನೆ 2026 ಅಡಿಯಲ್ಲಿ ಜಾರಿಗೊಳಿಸಿರುವ ಕೆಲವು ಕಠಿಣ ನಿಯಮಗಳು ಪ್ಲಾಂಟೇಷನ್ ಕಾರ್ಮಿಕರಿಗೆ ಗಂಭೀರ ತೊಂದರೆ ಉಂಟುಮಾಡುವ ಆತಂಕವಿದ್ದು, ಆ ನಿಯಮಗಳನ್ನು ಪರಿಶೀಲಿಸಿ, ತೋಟದ ಕಾರ್ಮಿಕರಿಗೆ ವಿಶೇಷ ವಿನಾಯಿತಿ ನೀಡುವಂತೆ ಐಎನ್‍ಟಿಯುಸಿ ಜಂಟಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಜಂಟಿ ಕಾರ್ಮಿಕ ಸಂಘಟನೆಗಳ ಪರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಅವರು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಫಿ, ಟೀ ಮತ್ತು ರಬ್ಬರ್ ತೋಟಗಳಲ್ಲಿ ದುಡಿಯುವ ಕಾರ್ಮಿಕರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಕಡಿಮೆ ದಿನಗೂಲಿ, ಉದ್ಯೋಗದ ಅನಿಶ್ಚಿತತೆ, ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ ಮತ್ತು ಇತರ ಅನಿವಾರ್ಯ ಖರ್ಚುಗಳು ಅವರ ಬದುಕಿನ ಭಾಗವಾಗಿವೆ ಎಂದು ತಿಳಿಸಿದರು.

ಇಂತಹ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯನಿಧಿ ಅವರ ಪಾಳಿಗೆ ಕೇವಲ ಉಳಿತಾಯವಲ್ಲ. ಅದು ಸಂಕಷ್ಟದ ಸಮಯದಲ್ಲಿ ನೆರವಾಗುವ ಪ್ರಮುಖ ಸಾಮಾಜಿಕ ಭದ್ರತೆಯಾಗಿದೆ. ಕಾರ್ಮಿಕರು ವರ್ಷಗಟ್ಟಲೆ ದುಡಿದು ಉಳಿಸಿದ ತಮ್ಮದೇ ಹಣವನ್ನು ಅಗತ್ಯವಿದ್ದಾಗ ಬಳಸಿಕೊಳ್ಳಲು ಅನಗತ್ಯ ನಿರ್ಬಂಧಗಳನ್ನು ವಿಧಿಸುವುದು ಅವರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

ಪಿಎಫ್ ಹಣದಲ್ಲಿ ಶೇ.25 ರಷ್ಟು ಮೊತ್ತವನ್ನು ಉಳಿಸಿಕೊಳ್ಳುವ ನಿಯಮಕ್ಕೆ ವಿನಾಯಿತಿ ನೀಡಬೇಕು. ಪಿಎಫ್ ಮುಂಗಡ ಹಣ ಪಡೆಯುವ ಸಂದರ್ಭದಲ್ಲಿ ಒಟ್ಟು ಮೊತ್ತದ ಶೇ.25 ರಷ್ಟು ಹಣವನ್ನು ಖಾತೆಯಲ್ಲೇ ಉಳಿಸಬೇಕು ಎಂಬ ನಿಯಮವು ಕಾರ್ಮಿಕರ ತುರ್ತು ಅಗತ್ಯಗಳಿಗೆ ಅಡ್ಡಿಯಾಗಬಾರದು ಎಂದು ಹೇಳಿದರು.

ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ ಮತ್ತು ತುರ್ತು ಸಂದರ್ಭಗಳಲ್ಲಿ ಹಣದ ಅಗತ್ಯವಿರುತ್ತದೆ. ಆದ್ದರಿಂದ ಪ್ಲಾಂಟೇಷನ್ ಕಾರ್ಮಿಕರಿಗೆ ಈ ನಿಯಮದಿಂದ ವಿನಾಯಿತಿ ನೀಡಿ ಅನ್ವಯಿಸುವ ನಿಯಮಗಳ ಪ್ರಕಾರ ಅರ್ಹ ಮೊತ್ತವನ್ನು ಪೂರ್ಣವಾಗಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂದರು.

ಉದ್ಯೋಗ ಕಳೆದುಕೊಂಡ ಅಥವಾ ಕೆಲಸ ತೊರೆದ ಕಾರ್ಮಿಕರು ತಮ್ಮ ಪಿಎಫ್ ಹಣದ ಪೂರ್ಣ ಸೆಟಲ್ಮೆಂಟ್ ಪಡೆಯಲು 12 ತಿಂಗಳವರೆಗೆ ಕಾಯಬೇಕಾದ ನಿಯಮವು ಅವರ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಲಿದೆ ಎಂದು ತಿಳಿಸಿದರು.
ಉದ್ಯೋಗವಿಲ್ಲದ ಅವಧಿಯಲ್ಲಿ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಕಾಯುವಿಕೆ ಅವಧಿಯಿಂದ ವಿನಾಯಿತಿ ನೀಡಿ, ಕಾನೂನು ಮತ್ತು ಅರ್ಹತಾ ನಿಯಮಗಳಿಗೆ ಅನುಗುಣವಾಗಿ ಪೂರ್ಣ ಸೆಟಲ್ಮೆಂಟ್ ಪಡೆಯಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.

ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಪರಿಗಣಿಸಿ ನ್ಯಾಯ ಒದಗಿಸದಿದ್ದರೆ, ಮುಂದಿನ ದಿನಗಳಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಐಎನ್‍ಟಿಯುಸಿ ಹಾಗೂ ಎಐಟಿಯುಸಿ ವತಿಯಿಂದ ಪ್ಲಾಂಟೇಷನ್ ವಲಯಾದ್ಯಂತ ಹಂತ ಹಂತವಾಗಿ ಹೋರಾಟಗಳನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಸಿ,ಧರ್ಮರಾಜ್ ಮಾತನಾಡಿ, ರಾಜ್ಯದ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕಾಫಿ, ಟೀ ಪ್ಲಾಂಟೇಷನ್‍ಗಳಲ್ಲಿ ಕೆಲಸ ಮಾಡುವ ನಾನ್‍ಸ್ಟಾಪ್ ಮತ್ತು ಸೂಪರ್‍ವೈಸರ್‍ಗಳ ವೇತನ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈ ಒಪ್ಪಂದವು 2026 ರ ಏಪ್ರಿಲ್‍ನಿಂದ ಜಾರಿಗೆ ಬಂದಿದೆ ಎಂದರು.

ನಾನ್‍ಸ್ಟಾಪ್ ಕಾರ್ಮಿಕರಿಗೆ ಶೇ.17 ರಷ್ಟು ವೇತನ ಹೆಚ್ಚಾಗಿದ್ದು, ಹೊಸದಾಗಿ ಕೆಲಸಕ್ಕೆ ಸೇರುವ ವಿವಿಧ ವರ್ಗದ ನೌಕರರಿಗೆ ಮೂಲ ವೇತನ ರೂ. 18,800 ರಿಂದ 19,200 ರವರೆಗೆ ತುಟ್ಟಿ ಭತ್ಯೆ ರೂ. 435.60 ಸಿಗುತ್ತದೆ. ಸೂಪರ್‍ವೈಸರ್ ಕಾರ್ಮಿಕರಿಗೆ ಶೇ.16 ರಷ್ಟು ವೇತನ ಹೆಚ್ಚಾಗಿದ್ದು, ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಮೂಲ ವೇತನ ರೂ. 18,400 ಮತ್ತು ತುಟ್ಟಿ ಭತ್ಯೆ ರೂ. 435.60 ಸಿಗಲಿದೆ ಎಂದು ಹೇಳಿದರು.

ಕಾಫಿ, ಟೀ ಪ್ಲಾಂಟೇಷನ್‍ಗಳಲ್ಲಿ ಈ ಮೇಲಿನ ವೇತನದೊಂದಿಗೆ ವಾಸದ ಮನೆ, ಕುಡಿಯುವ ನೀರು, ಉಚಿತ ಆರೋಗ್ಯ ಸೇವೆಗಳು ಸೇರಿದಂತೆ ಭವಿಷ್ಯನಿಧಿ, ಗ್ರಾಚ್ಯುಟಿ, ಬೋನಸ್ ಮುಂತಾದ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.
ಕಳೆದ ನಾಲ್ಕು ದಶಕಗಳಿಂದ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಐಎನ್‍ಟಿಯುಸಿ ಹಾಗೂ ಎಐಟಿಯುಸಿ ಕಾರ್ಮಿಕ ಸಂಘಗಳು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅವರೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡು ಬರುತ್ತಿದ್ದು, ಇದರಿಂದಾಗಿ ರಾಜ್ಯದ ಪ್ಲಾಂಟೇಷನ್ ಕಾರ್ಮಿಕರಿಗೆ ಗೌರವಿತವಾದ ವೇತನಗಳು ಸಿಗಲು ಸಾಧ್ಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ಲಾಂಟೇಷನ್ ಕಾರ್ಮಿಕ ಸಂಘಟನೆಗಳ ಮುಖಂಡರಾದ ರಾಮಚಂದ್ರ ಒಡೆಯಾರ್, ಎಸ್.ಗೋವಿಂದನ್, ವಿ.ಮಾಣಿಕ್ಯ, ಎ.ಪಿ.ಸೆಲ್ವಂ, ಜಿ.ರಮೇಶ್, ಆನಂದ್ ಉಪ್ಥಿತರಿದ್ದರು.

 

 

Leave a Reply

Your email address will not be published. Required fields are marked *