ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆವತಿ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಶನಿವಾರ ನಿಗದಿಯಾಗಿತ್ತು. ಅಧ್ಯಕ್ಷತೆ ವಹಿಸಬೇಕಾಗಿದ್ದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ನಯನ ಮೋಟಮ್ಮ ಈ ಆಂದೋಲನಕ್ಕೆ ಗೈರಾಗಿದ್ದು, ಚಿಕ್ಕಮಗಳೂರು ತಹಶೀಲ್ದಾರ್ ರೇಷ್ಮಾ ರೇಷ್ಮಾ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ಸಮಸ್ಯೆಗಳನ್ನು ಶಾಸಕರ ಬಳಿ ಹೇಳಿಕೊಳ್ಳಬೇಕು ಶಾಸಕರ ನೇತೃತ್ವದಲ್ಲಿ ಪ್ರಜಾ ಸೇವೆ ಕಾರ್ಯಕ್ರಮ ನಡೆಯಬೇಕು, ಆದರೆ ಇಲ್ಲಿನ ಕಾರ್ಯಕ್ರಮಕ್ಕೆ ಶಾಸಕರು ಬಾರದಿರುವುದು ತಾವು ಮಾಡಿರುವ ಅಭಿವೃದ್ಧಿ ಕೆಲಸ ಎಷ್ಟೆಂದು ಗೊತ್ತಾಗುತ್ತದೆ ಎಂದು ಸಾರ್ವಜನಿಕರು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರ ಅನುಪಸ್ಥಿತಿಗೆ ಸಮಜಾಯಿಸಿ ನೀಡಿದ ತಹಸಿಲ್ದಾರ್ ಅವರು ನನ್ನ ಅಧ್ಯಕ್ಷತೆಯಲ್ಲಿಯೇ ನಿಮ್ಮೆಲ್ಲ ಸಮಸ್ಯೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿ ಶಾಸಕರು ಮತ್ತು ಸರ್ಕಾರದ ಮಟ್ಟಕ್ಕೆ ತಲುಪಿಸುವುದಾಗಿ ತಿಳಿಸಿದರು. ನಂತರ ಪ್ರಾರಂಭಗೊಂಡ ಪ್ರಜಾಸೇವೆ ಆಂದೋಲನದಲ್ಲಿ ಆನ್ಲೈನ್ ಅರ್ಜಿಗಳನ್ನು ಸಾರ್ವಜನಿಕರಿಗೆ ವಿತರಿಸಿದರು. ವಸತಿ, ಕುಡಿಯುವ ನೀರು, ಅರಣ್ಯ- ಕಂದಾಯ ಭೂಮಿ ಜಂಟಿ ಸರ್ವೆ, ಪೋಡಿ ಸಮಸ್ಯೆ, ಉದ್ಯೋಗ ಖಾತ್ರಿ ಯೋಜನೆಯ ಸಮಸ್ಯೆ, ರಸ್ತೆ ಅಂಗವಿಕಲ, ವಿಧವ ವೇತನ, ವಿವಿಧ ಪಿಂಚಣಿ ಯೋಜನೆಗಳು ಸ್ಥಗಿತವಾಗಿರುವ ಬಗ್ಗೆ ಅನೇಕ ದೂರುಗಳು ಬಂದವು.
ಆವತಿ ಹೋಬಳಿ ಬಿಜೆಪಿ ಅಧ್ಯಕ್ಷ ಕೆರೆಮಕ್ಕಿಮಹೇಶ್ ಮಾತನಾಡಿ, ವಿಧವಾ ವೇತನ ವೃದ್ಧಾಪ್ಯ ವೇತನ ಸೇರಿದಂತೆ ಕೆಲ ಯೋಜನೆಗಳಿಗೆ ಸರ್ಕಾರ ವಾರ್ಷಿಕ ಆದಾಯ 30000 ರೂ ಗಳಿಗೆ ನಿಗದಿ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ, ಕೂಲಿ ಮಾಡುವ ಒಂದು ಕುಟುಂಬದ ವಾರ್ಷಿಕ ಆದಾಯವು 50,000 ಮೀರಲಿದ್ದು, ಈ ಆದೇಶವನ್ನು ಸಡಿಲಿಸಿ, ತಕ್ಷಣಕ್ಕೆ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಹಾಕಬೇಕೆಂದು ಒತಾಯಿಸಿದರು.
ಫಾರಂ ನಂಬರ್ 57 ನಲ್ಲಿ ಬಗರ್ ಹುಕುಂ ಸಾಗುವಳಿ ದಾರರಿಗೆ ಕಾಫಿ ಬೆಳೆಯನ್ನು ಹೊರತುಪಡಿಸಿ ಸಾಗುವಳಿ ಚೀಟಿ ನೀಡುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವತಿ ಹೋಬಳಿ ವ್ಯಾಪ್ತಿಯ ಜಮೀನುಗಳಲ್ಲಿ ಕಾಫಿಯನ್ನು ಬಿಟ್ಟು ಜೋಳ ಗೋಧಿ ರಾಗಿ ಬೆಳೆಯಲು ಸಾಧ್ಯವೇ..? ಎಂದು ಪ್ರಶ್ನಿಸಿದರು. ತಕ್ಷಣಕ್ಕೆ ಕಾಫಿಯನ್ನು ಸೇರಿಸಿ ಆದೇಶ ಹೊರಡಿಸಿ ಸಣ್ಣಪುಟ್ಟ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಮುಂದಾಗ ಬೇಕೆಂದು ಆಗ್ರಹಿಸಿದರು.
ಆವತಿ ಹೋಬಳಿ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಬೆರಣಗೋಡು ಮತ್ತು ಕಸಿಗೆ ಗ್ರಾಮದ ಮುಖ್ಯ ರಸ್ತೆಗಳು ಸೇರಿದಂತೆ ಮುಖ್ಯ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿದ್ದು ಮರು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಂಕ್ರೀಟ್ ತಡೆಗೋಡೆ, ನೀರುಗಾಲುವೆ ಎಂತಹ ಕಾಂಕ್ರೀಟ್ ಕಾಮಗಾರಿಗಳಿಗೆ ತಡೆ ನೀಡಿದ್ದು, ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಅದನ್ನು ಮುಂದುವರಿಸುವಂತೆ ಒತ್ತಾಯಿಸಿದರು.
ಬೆರಣಗೋಡು ಗ್ರಾಮಸ್ಥರಾದ ನಾಗಪ್ಪ ಗೌಡ ಮಾತನಾಡಿ, ಬಸರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಬೇರೆ ಕಡೆ ನಡೆದ ಕಾಮಗಾರಿಯ ಫೋಟೋ ತೋರಿಸಿ ಬಿಲ್ ಮಾಡಿಸಲಾಗಿದೆ ಇದನ್ನು ಕೂಲಂಕುಶವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಬೆರಣಗೋಡು ಗ್ರಾಮದ ಮಂಜುನಾಥ್ ಮಾತನಾಡಿ, ನಮ್ಮ ಹೋಬಳಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಕೂಡಲೇ ಹಕ್ಕುಪತ್ರವನ್ನು ನೀಡಿ ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಒತಾಯಿಸಿದರು.
ದಾನಿಹಳ್ಳಿ ಗ್ರಾಮದ ಚಂದ್ರಶೇಖರ್ ಮಾತನಾಡಿ ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿದ್ದು, ಇದರಿಂದ ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದ್ದು, ಇದನ್ನು ಬೇರೆ ಸ್ಥಳ ಗುರುತಿಸಿ, ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಹಾರ್ಜಿಹಳ್ಳಿ ಗ್ರಾಮದ ಶೇಶಮ್ಮ,ಯಶೋಧ ಮತ್ತು ಸರೋಜ ರವರು 94c ನಲ್ಲಿ ಮನೆಯ ಹಕ್ಕು ಪತ್ರಕ್ಕಾಗಿ ಗ್ರಾಮ ಪಂಚಾಯಿತಿಗೆ ಅಲೆದಾಡಿ ಸಾಕಾಗಿದ್ದು ತಕ್ಷಣವೇ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು. ಹಾರ್ಜಿಹಳ್ಳಿಯ ನಾರಾಯಣಗೌಡ ಮಾತನಾಡಿ, ಜಮೀನಿನ ಪೋಡಿಗಾಗಿ ಅರ್ಜಿ ಸಲ್ಲಿಸಿ ತಾಲೂಕು ಕಚೇರಿಗೆ ಅಲೆದಾಡಿ ಚಪ್ಪಲಿ ಸವಿಸಿದರು ಇನ್ನು ಪೋಡಿ ದುರಸ್ತಿ ಆಗದ ಬಗ್ಗೆ ಅಧಿಕಾರಿಗಳ ಮುಂದೆ ಬೇಸರ ವ್ಯಕ್ತಪಡಿಸಿದರು.

ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ಬಂದಿದ್ದ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಅಧಿಕಾರಿಗಳು ತಬ್ಬಿಬ್ಬಾದರು.ಒಟ್ಟಿನಲ್ಲಿ ಕಾಟಚಾರಕ್ಕೆ ಪ್ರಜಾ ಸೇವೆ ಕಾರ್ಯಕ್ರಮವಾಗದೆ, ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕೆಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದರು.
ಪ್ರಜಾ ಸೇವೆ ಆಂದೋಲನದಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ , ವಿಜಯಕುಮಾರ್, ACF ಆಕರ್ಷ(IFS) ಜಿಲ್ಲಾ ಪಂಚಾಯಿತಿ ಮುಖ್ಯ ಅಭಿಯಂತರ ಹೆಚ್ ಬಿ ರವಿ, ಮಲ್ಲಂದೂರು ಪೊಲೀಸ್ ಠಾಣಾಧಿಕಾರಿ ರಂಗನಾಥ್, ಆಲ್ದೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್, ಮಲ್ಲಂದೂರು ವಲಯ ಅರಣ್ಯ ಅಧಿಕಾರಿಗಳು ಮೆಸ್ಕಾಂ, ತೋಟಗಾರಿಕೆ, ಕೃಷಿ, ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು,ಆವತಿ ರೆವಿನ್ಯೂ ಇನ್ಸ್ಪೆಕ್ಟರ್ ಲವಕುಮಾರ್, ಬೈಗೂರು, ಬಸರವಳ್ಳಿ,ಆವತಿ ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


