ಆಟೋವೊಂದಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ಸಮೀಪದ ಹಳೇಕೋಟೆ ಗ್ರಾಮದಲ್ಲಿ ಸಂಭವಿಸಿದೆ.
ಇಂದು ಭಾನುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಯುವಕ ಪ್ರವೀಣ್ (29 ವರ್ಷ) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಪ್ರವೀಣ್ ಸ್ಥಳೀಯ ಹಳೇಕೋಟೆ ಬಡಾವಣೆಯ ದಿವಂಗತ ಜಗದೀಶ್ ಎಂಬವವರ ಪುತ್ರ ಎಂದು ತಿಳಿದುಬಂದಿದೆ. ಹಳೇಕೋಟೆ ಸರ್ಕಲ್ ಬಳಿಯೇ ಆಟೋಗೆ ಬೈಕ್ ಡಿಕ್ಕಿ ಹೊಡೆದು ಸಮೀಪದಲ್ಲಿದ್ದ ಕಲ್ಲಿಗೆ ಡಿಕ್ಕಿಯಾಗಿದ್ದು, ಇದರಿಂದ ತೀವ್ರ ಗಾಯಗೊಂಡು ಪ್ರವೀಣ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಟೋ ಮತ್ತು ಬೈಕ್ ಎರಡೂ ಮೂಡಿಗೆರೆ ಕಡೆಯಿಂದ ಹಳೇಕೋಟೆ ಕಡೆಗೆ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆಟೋದಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವ ಪ್ರಯಾಣಿಕನ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ತಕ್ಷಣ ಅಂಬುಲೆನ್ಸ್ ಮೂಲಕ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ರವಾನಿಸಿದ್ದು, ಅಷ್ಟು ಹೊತ್ತಿಗಾಗಲೇ ಪ್ರವೀಣ್ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ಮೃತ ಪ್ರವೀಣ್ ಮೂಡಿಗೆರೆ ಬಿಳಗುಳದ ಅಗ್ರಿಮಾರ್ಟ್ ನಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪ್ರವೀಣ್ ಅವತ ತಂದೆ ಜಗದೀಶ್ ಅವರು ಇತ್ತೀಚೆಗಷ್ಟೇ ನಿಧನ ಹೊಂದಿದ್ದರು ಎಂದು ತಿಳಿದುಬಂದಿದೆ.
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಸ್ವರೂಪದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.


