ಜಗತ್ತಿನ ಶೋಕವನ್ನು ತೊಡೆದುಹಾಕುವ ಶಕ್ತಿ ರಾಮಾಯಣ ಗ್ರಂಥಕ್ಕಿದೆ. ಇದರಲ್ಲಿರುವ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಪರಿವರ್ತತೆ ತರಲು ಸಾಧ್ಯವಿದೆ ಎಂದು ಕೋಳೂರು ಮುರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್ ಹೇಳಿದರು.
ಅವರು ಸೋಮವಾರ ಮೂಡಿಗೆರೆ ಪಟ್ಟಣದ ತಾ.ಪಂ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವನ ಸ್ವಾರ್ಥ ಮನೋಭಾವದಿಂದ ಸಮಾಜದ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಕೆಲವರು ಪ್ರಚಾರಕ್ಕಾಗಿ ಸೇವೆ ಮಾಡುತ್ತಿದ್ದರೆ, ಇನ್ನು ಕೆಲವರು ಕುಟುಂಬದ ಏಳಿಗೆಗಾಗಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಸಮಾಜಕ್ಕೆ ಮಾರಕವಾಗಿದೆ. ಮಕ್ಕಳಲ್ಲಿ ನಮ್ಮ ಸಂಸ್ಕøತಿ, ಪರಂಪರೆ ಹಾಗೂ ಹಬ್ಬಗಳ ಮಹತ್ವದ ಕುರಿತು ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಸ್.ಅಶ್ವಿನಿ ಮಾತನಾಡಿ, ಮಾನವೀಯ ಗುಣಗಳನ್ನು ಹೊಂದಿರುವವರು ಮಾತ್ರ ಮಹನೀಯರಾಗಲು ಸಾಧ್ಯ. ಮಹನೀಯರ ಜಯಂತಿ ಆಚರಣೆಗಳು ಅವರ ಆದರ್ಶಗಳನ್ನು ಸ್ಮರಿಸುವ ಜತೆಗೆ, ರಾಮಾಯಣದ ಜೀವನ ಮೌಲ್ಯಗಳು ಹಾಗೂ ಮಹನೀಯರ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪ.ಪಂ. ಮಾಜಿ ಉಪಾಧ್ಯಕ್ಷ ಹೊಸ್ಕೆರೆ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು.
ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‍ಗೌಡ, ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ವಿವಿಧ ಸಂಘ ಸಂಸ್ಥೆಯ ಮುಖಂಡರಾದ ಮಂಜುನಾಥ್ ಬೆಟ್ಟಗೆರೆ, ಲೋಕೇಶ್, ನವೀನ್, ಸೀತಮ್ಮ, ಅಣ್ಣೇಗೌಡ, ಚಂದ್ರೇಶ್, ಪೂರ್ಣೇಶ್, ಬಕ್ಕಿ ಮಂಜು, ಶಿಕ್ಷಕಿ ವೇದಾ ಉಪಸ್ಥಿತರಿದ್ದರು.


